ಮಂಗಳಮುಖಿಯರಿಗೆ ಗುರುತಿನ ಚೀಟಿ: ದ.ಕ. ಜಿಲ್ಲಾಧಿಕಾರಿ

Update: 2019-07-22 15:26 GMT

ಮಂಗಳೂರು, ಜು.22: ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳ ಆಶ್ರಯದಲ್ಲಿ ನಡೆದ ಮಂಗಳಮುಖಿಯರ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳಮುಖಿಯರ ಗುಂಪುಗಳನ್ನು ಮಾಡಿ ಅದರಲ್ಲಿ ನಿಪುಣತೆ ಹೊಂದಿದ ವ್ಯಕಿಯನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು. ಗುರುತಿನ ಚೀಟಿಯನ್ನು ಪಡೆಯಲು ಇಚ್ಚಿಸುವವರಿಗೆ ತಾಲೂಕು ಮಟ್ಟದಲ್ಲಿ ವೈದ್ಯಕೀಯ ಪ್ರಕ್ರಿಯೆಯನ್ನು ನಡೆಸಲು ಸಮಿತಿಗಳು ರಚನೆಯಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗುರುತಿನ ಚೀಟಿ ಪಡೆಯಲು 17 ಅಧಿಕಾರಿಗಳ ನೇತೃತ್ವದಲ್ಲಿರುವ ಸಮಿತಿಗಳು ಅಂಕಿ ಅಂಶಗಳನ್ನು ಸಂಗ್ರಹಿಸಬೇಕು. ಗುರುತಿನ ಚೀಟಿ ಪಡೆಯಲು ಅರ್ಹವಿರುವ ಮಂಗಳಮುಖಿಯರ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಬೇಕು. ಈ ಎಲ್ಲ ಕಾರ್ಯಗಳು ಒಂದು ವಾರದೊಳಗೆ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎರಡು ವಾರಗಳ ಬಳಿಕ ಜಿಲ್ಲಾ ಮಟ್ಟದ ಸಮಿತಿಗಳು ಮತ್ತು ತಾಲೂಕು ಮಟ್ಟದ ಸಮಿತಿಗಳು, ಸಂಬಂಧಪಟ್ಟ ಇಲಾಖೆಗಳು ಮತ್ತು ಸರಕಾರೇತರ ಸಂಸ್ಥೆಗಳನ್ನು ಒಳಗೊಂಡು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಬೇಕು. ಕಾರ್ಯಾಗಾರದಲ್ಲಿ ಆರ್ಥಿಕ ಸ್ಥಿತಿಗತಿ, ಸಮಾನ ಹಕ್ಕು ಮತ್ತು ಇನ್ನಿತರ ವಿಷಯಗಳ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ದಮನಿತ ಮಹಿಳೆಯರ ನಿಸ್ಸಾಹಕತೆ ಹೋಗಲಾಡಿಸಲು ಮತ್ತು ಅವರ ಜೀವನಮಟ್ಟ ಸುಧಾರಿಸಲು ಹೆಚ್ಚಿನ ಒತ್ತು ನೀಡಬೇಕು. ಅವರಲ್ಲಿ ಪಡಿತರ ಚೀಟಿ, ಗುರುತಿನ ಚೀಟಿಯಂತಹ ಅಗತ್ಯ ದಾಖಲೆಗಳು ಲಭ್ಯವಿರುವುದನ್ನು ಖಾತ್ರಿ ಪಡಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಅವರಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ದೊರಕುವಂತೆ ಕ್ರಮ ವಹಿಸಬೇಕು ಎಂದರು.

ದಮನಿತ ಮಹಿಳೆಯರನ್ನು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳುವಂತಹ ವ್ಯಕ್ತಿಗಳನ್ನು ಹಾಗೂ ಸ್ಥಳಗಳನ್ನು ಪತ್ತೆ ಹಚ್ಚಿ ಅವರ ಬಗ್ಗೆ ಮಾಹಿತಿ ಕಲೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ಯಾಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ್ ಪೂಜಾರಿ, ಉಸ್ಮಾನ್, ಹಿಂದ್ ಕುಷ್ಟ್ ನಿವಾರಣಾ ಸಮಿತಿಯ ಯೋಜನಾಧಿಕಾರಿ ಹರೀಶ್ ಎ. ಹಾಗೂ ಇತರ ಇಲಾಖೆಗಳ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News