'ಮಹಾಭಾರತದಲ್ಲಿ ವೇದವ್ಯಾಸರು ತೋರಿದ್ದು ಸಮಾಜದ ಅಭಿವ್ಯಕ್ತಿ'

Update: 2019-07-22 16:11 GMT

ಮಣಿಪಾಲ, ಜು.22: ಪುರಾಣಗಳು, ಮಹಾಭಾರತ, ವೇದವಿಭಾಗವನ್ನು ವೇದವ್ಯಾಸರು ಒಬ್ಬರೇ ಹೇಗೆ ಮಾಡಿರಲು ಸಾಧ್ಯವೆಂಬುದು ಕೆಲವರ ಪ್ರಶ್ನೆ. ಕವಿ ಬರೆಯುವ ಕವನವೂ ಸಮಾಜದ ಅನುಭವವಾಗಿರುತ್ತದೆ, ಅವರದ್ದೇ ಆಗಿರುವುದಿಲ್ಲ. ಅದೇ ರೀತಿ ವೇದವ್ಯಾಸರು ಸಹ ಸಮಾಜದ ಅಭಿವ್ಯಕ್ತಿಯನ್ನೇ ತೋರಿಸಿದರು ಎಂದು ಹಿರಿಯ ಚಿಂತಕ, ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ಮಾಹೆಯ ತತ್ವಜ್ಞಾನ ವಿಭಾಗದಲ್ಲಿ ತತ್ವಶಾಸ್ತ್ರ ವಿಭಾಗ ಮತ್ತು ಸುಬ್ರಹ್ಮಣ್ಯದ ವೇದವ್ಯಾಸ ಸಂಶೋಧನ ಕೇಂದ್ರದ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜನೆಗೊಂಡ ‘ಮಹಾಭಾರತ ಮತ್ತು ಭಾರತೀಯ ದರ್ಶನಗಳು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು. ಮಹಾಭಾರತದಲ್ಲಿ ತತ್ವಶಾಸ್ತ್ರೀಯ ದೃಷ್ಟಿ ಕುರಿತು ಮಾತನಾಡಿದ ಅವರು, ಪ್ರಜ್ಞೆಗೆ ಚಲನೆ ಇಲ್ಲ. ಅದು ಅನೇಕರನ್ನು ನೋಡಿ ಅವರಂತೆ ಅನುಕರಿಸು ಮೂಲಕ ಬೆಳೆಯುತ್ತದೆ ಎಂದರು.

ಲೋಕವನ್ನು ಹೇಗೆ ಇದೆಯೋ ಹಾಗೆ ನೋಡುವ ಮನೋಧರ್ಮವನ್ನು ಮಹಾಭಾರತ ಬೆಳೆಸುತ್ತದೆ. ದರ್ಶನವೆಂದರೂ ಇದೇ ಅರ್ಥ. ಮಹಾಭಾರತದ ಆಶಯವೂ ಇದೇ ಆಗಿದೆ. ಆದರೆ ನಮಗೆ ಒಪ್ಪಿತವಾಗದಿದ್ದರೆ ದುರಂತವಾಗಿ ಕಂಡುಬರುತ್ತದೆ. ಇತಿಹಾಸಕಾರನಿಗೆ ಹಾಗೆ ಕಾಣುವುದಿಲ್ಲ. ಇತಿಹಾಸವೆಂದರೆ ಮರುಕಳಿಸುವುದು. ಸಂವೇದನಶೀಲನಾದವನು ಮಾತ್ರ ಸಮುದಾಯದ ಅನುಭವಗಳನ್ನು ಕಾಣುವ ಮೂಲಕ ನೋಡುತ್ತಾನೆ, ಇದು ಅದುವರೆಗಿನ ಅನುಭವಗಳಿಂದ ಪಾಾಗುವ ಮಾರ್ಗವೂ ಹೌದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಪೂರ್ವಿಕರು ಬಹಳ ಕಷ್ಟಪಟ್ಟು ರಚಿಸಿದ ಪ್ರಾಚೀನ ಗ್ರಂಥಗಳ ಸಂಶೋಧನೆ, ವಿಮರ್ಶೆ ನಡೆಯುವ ಮೂಲಕ ಆ ಜ್ಞಾನ ಪರಂಪರೆಯನ್ನು ಮುಂದುವರಿಸವ ಅಗತ್ಯವಿದೆ ಎಂದರು.

ಮಣಿಪಾಲ ಸೆಂಟರ್ ಫಾರ್ ಯೂರೋಪಿಯನ್ ಸ್ಟಡೀಸ್ ನಿರ್ದೇಶಕಿ ಡಾ.ನೀತಾ ಇನಾಂದಾರ್ ಮಾತನಾಡಿದರು. ತತ್ವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶ್ರೀನಿವಾಸಕುಮಾರ್ ಎನ್. ಆಚಾರ್ಯ ಸ್ವಾಗತಿಸಿದರೆ, ಡಾ. ಎಸ್.ಆರ್.ಅರ್ಜುನ ವಂದಿಸಿದರು. ಸಂಶೋಧಕ ಡಾ.ಆನಂದ ತೀರ್ಥ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News