ಪಚ್ಚನಾಡಿ ಪುತ್ರಿಯಿಂದ ವೃದ್ಧೆಯ ಹೊರದಬ್ಬಿದ ಪ್ರಕರಣ: ಆಶ್ರಮಕ್ಕೆ ಸಂತ್ರಸ್ತೆಯ ಸ್ಥಳಾಂತರ

Update: 2019-07-22 16:15 GMT

ಮಂಗಳೂರು, ಜು.22: ನಗರದ ಪಚ್ಚನಾಡಿಯಲ್ಲಿ ಪುತ್ರಿಯಿಂದ ಹೊರತಳ್ಳಲ್ಪಟ್ಟ ವೃದ್ಧ ತಾಯಿಯನ್ನು ಹಿರಿಯ ನಾಗರಿಕರ ಸಹಾಯವಾಣಿಯ ನೆರವಿನಿಂದ ಸೋಮವಾರ ಆಶ್ರಮವೊಂದಕ್ಕೆ ಸ್ಥಳಾಂತರಿಸಲಾಯಿತು.

ಜಿಲ್ಲಾ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಕಲ್ಯಾಣ ಅಧಿಕಾರಿ ಯಮುನಾ ಡಿ. ಮತ್ತು ಸಿಬಂದಿ ಸೂರಜ್, ಹಿರಿಯ ನಾಗರಿಕರ ಸಹಾಯವಾಣಿಯ ಸಂಯೋಜಕಿ ಲಿಡ್ವಿನ್ ಲೋಬೊ, ಸಮಾಜ ಸೇವಾ ಕಾರ್ಯಕರ್ತೆ ಪವಿತ್ರಾ ಅವರು ಸೇರಿಕೊಂಡು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರ ಸಹಾಯದಿಂದ 80 ವರ್ಷದ ಈ ಹಿರಿ ಜೀವವನ್ನು ಆಶ್ರಮಕ್ಕೆ ಸೇರಿಸಿದರು.

ಪಚ್ಚನಾಡಿಯ ಮನೆಯೊಂದರಲ್ಲಿ ವಾಸವಾಗಿದ್ದ ತಾಯಿ ಮತ್ತು ಪುತ್ರಿ ಮಧ್ಯೆ ಹಲವು ಸಮಯದಿಂದ ಜಗಳ ನಡೆಯುತ್ತಿದ್ದು, ಕಳೆದ ಶುಕ್ರವಾರ (ಜು.19) ರಾತ್ರಿ ಈ ಜಗಳ ತಾರಕಕ್ಕೇರಿ ತಡ ರಾತ್ರಿ ಒಂದು ಗಂಟೆ ವೇಳೆಗೆ ಪುತ್ರಿಯು ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದಳು. ಮಳೆ ಬರುತ್ತಿದ್ದರೂ ಇಡೀ ರಾತ್ರಿಯನ್ನು ತಾಯಿ ಮನೆಯ ಹೊರಗೆ ಕಳೆದಿದ್ದರು. ಶನಿವಾರ ಬೆಳಗ್ಗೆ ಅಕ್ಕ ಪಕ್ಕದ ಮನೆಯವರು ಪುತ್ರಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ತಾಯಿಯನ್ನು ಮನೆಗೆ ಸೇರಿಸಿದ್ದಳು.

ಈ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರ ಗಮನಕ್ಕೆ ತಂದು, ಪುತ್ರಿಯ ವಿರುದ್ಧ ಕ್ರಮ ಜರಗಿಸುವಂತೆ ಹಾಗೂ ತಾಯಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು.

ಪೊಲೀಸರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವಂತೆ ಹಿರಿಯ ನಾಗರಿಕರ ಸಹಾಯವಾಣಿಗೆ ತಿಳಿಸಿದ್ದರು. ಅದರಂತೆ ಶನಿವಾರ ಸಂಜೆ ಹಿರಿಯ ನಾಗರಿಕರ ಸಹಾಯವಾಣಿಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಸೋಮವಾರ ಸಹಾಯವಾಣಿಯ ಸಂಯೋಜಕರು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಮತ್ತು ಗ್ರಾಮಾಂತರ ಪೊಲೀಸರ ಸಹಾಯದಿಂದ ವೃದ್ಧೆಯ ಮನ ಒಲಿಸಿ ಅವರನ್ನು ಆಶ್ರಮಕ್ಕೆ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News