ಕಾರ್ಮಿಕ ವರ್ಗದ ಧ್ವನಿ ಅಡಗಿಸಲು ಮೋದಿ ಸರಕಾರದ ಹುನ್ನಾರ: ವಸಂತ ಆಚಾರಿ

Update: 2019-07-22 16:48 GMT

ಮಂಗಳೂರು, ಜು.22: ಎರಡನೆಯ ಬಾರಿಗೆ ಅಧಿಕಾರದ ಗದ್ದುಗೆ ಏರಿದ ನರೇಂದ್ರ ಮೋದಿ ಸರಕಾರವು ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳನ್ನು ವೇಗವಾಗಿ ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯಲು ಹೊರಟಿದೆ. ತನ್ನ ಮೊದಲ 100 ದಿನಗಳ ಕಾರ್ಯಕ್ರಮದಲ್ಲಿ ಕಾರ್ಮಿಕ ವರ್ಗವು ವೀರೋಚಿತ ಹೋರಾಟ ಮಾಡಿ ಪಡೆದುಕೊಂಡ 44 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾರ್ಪಡಿಸುವ ಹುನ್ನಾರ ನಡೆಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.

ನಗರದ ಬೋಳಾರದಲ್ಲಿರುವ ಯೂನಿಯನ್ ಕಚೇರಿಯ ಸಭಾಂಗಣದ ಕಾಂ.ಬಿ.ಮಾಧವ ವೇದಿಕೆಯಲ್ಲಿ ಸೋಮವಾರ ಜರುಗಿದ ಸಿಐಟಿಯು 3ನೇ ಮಂಗಳೂರು ನಗರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಸರಕಾರವು ಎಲ್ಲಾ ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡುತ್ತಿವೆ. ಸಾರ್ವಜನಿಕ ಉದ್ದಿಮೆಗಳನ್ನು ವಾರಕ್ಕೊಮ್ಮೆ ಮಾರಾಟ ಮಾಡುವ ಸಲುವಾಗಿಯೇ ಕೇಂದ್ರ ಸಚಿವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಕನಿಷ್ಠ ಕೂಲಿಯನ್ನು ದಿನವೊಂದಕ್ಕೆ 178 ರೂ.ಗೆ ಇಳಿಸಲು ನಿರ್ಧರಿಸಿರುವ ಕೇಂದ್ರ ಸರಕಾರವು ಕಾರ್ಮಿಕರ ಎಲ್ಲಾ ಸವಲತ್ತುಗಳನ್ನು ನಾಶಪಡಿಸಲು ಹೊರಟಿದೆ. ಮತ್ತೊಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ಹಿಂದುತ್ವದ ಅಮಲನ್ನೇರಿಸಿ ದುಡಿಯುವ ವರ್ಗದ ಐಕ್ಯತೆಯನ್ನು ಒಡೆಯಲು ಹವಣಿಸುತ್ತಿದೆ .ಒಟ್ಟಿನಲ್ಲಿ ದೇಶದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಕಾರ್ಮಿಕ ವರ್ಗದ ಧ್ವನಿಯನ್ನು ಅಡಗಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ವಸಂತ ಆಚಾರಿ ಆರೋಪಿಸಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಸಮಾರೋಪ ಭಾಷಣ ಮಾಡಿದರು.

ಸಿಐಟಿಯು ಮಂಗಳೂರು ನಗರಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಮುಖಂಡರಾದ ರವಿಚಂದ್ರ ಕೊಂಚಾಡಿ, ಭಾರತಿ ಬೋಳಾರ, ಅಹಮ್ಮದ್ ಬಾವಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News