ಸೋನಭದ್ರ: ಅಮಾಯಕರ ಮೇಲಿನ ಗುಂಡಿನ ದಾಳಿಯ ವೀಡಿಯೊ ವೈರಲ್

Update: 2019-07-22 17:00 GMT

ಲಕ್ನೊ, ಜು.22: ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಜುಲೈ 17ರಂದು ನಡೆದಿದ್ದ ಗುಂಡಿನ ದಾಳಿ ಪ್ರಕರಣದ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಗ್ರಾಮದ ಸರಪಂಚನ ನೇತೃತ್ವದಲ್ಲಿ ಆತನ ಹಿಂಬಾಲಕರು ನಡೆಸಿದ್ದ ಗುಂಡಿನ ದಾಳಿಯಲ್ಲಿ 10 ರೈತರು ಮೃತಪಟ್ಟಿದ್ದು 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ರೈತನೊಬ್ಬ ತನ್ನ ಮೊಬೈಲ್‌ನಲ್ಲಿ ಘಟನೆಯ ವೀಡಿಯೊ ಚಿತ್ರೀಕರಣ ಮಾಡಿದ್ದು, ಅದು ಈಗ ಸುದ್ದಿಮಾಧ್ಯಮಗಳ ಕಚೇರಿಗೆ ತಲುಪಿದೆ ಎಂದು ವರದಿಯಾಗಿದೆ.

ಆದಿವಾಸಿ ರೈತರು ತಲೆತಲಾಂತರದಿಂದ ಕೃಷಿ ಮಾಡಿಕೊಂಡು ಬರುತ್ತಿದ್ದ 36 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದ ಇದಾಗಿದೆ. ಈ ಜಮೀನನ್ನು ತಾನು 10 ವರ್ಷದ ಹಿಂದೆ ಖರೀದಿಸಿದ್ದೆ ಎಂದಿದ್ದ ಗ್ರಾಮದ ಸರಪಂಚ ಯಗ್ಯಾ ದತ್ ಜಮೀನನ್ನು ಬಿಟ್ಟುಕೊಡುವಂತೆ ಗದರಿಸಿದ್ದ. ಆದರೆ ರೈತರು ವಿರೋಧಿಸಿದ್ದರು. ಆಗ 32 ಟ್ರಾಕ್ಟರ್‌ಗಳಲ್ಲಿ ತನ್ನ 200 ಬೆಂಬಲಿಗರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ. ವೈರಲ್ ಆಗಿರುವ ವೀಡಿಯೊದಲ್ಲಿ ಗ್ರಾಮದ ಬಳಿ ಟ್ರಾಕ್ಟರ್‌ಗಳು ಸಾಲಾಗಿ ನಿಂತಿರುವುದು, ದೊಣ್ಣೆ ಹಿಡಿದುಕೊಂಡಿದ್ದ ಹಲವರು ರೈತರನ್ನು ಥಳಿಸುತ್ತಿರುವ ದೃಶ್ಯವಿದೆ.

ಜನರ ಆಕ್ರಂದನದ ಮಧ್ಯೆ ಗುಂಡಿನ ಸದ್ದು ಕೇಳಿಬಂದಿದೆ. ಅಲ್ಲದೆ ಕೆಲವರು ನೆಲದ ಮೇಲೆ ಬಿದ್ದು ನೋವಿನಿಂದ ನರಳುವುದು, ಮಹಿಳೆಯೊಬ್ಬರು ‘ಪೊಲೀಸರನ್ನು ಕರೆಯಿರಿ’ ಎಂದು ಗಾಬರಿಯಿಂದ ಕೂಗುವುದು ಇವೆಲ್ಲಾ ವೀಡಿಯೊದಲ್ಲಿ ದಾಖಲಾಗಿದೆ. ‘‘ಸುಮಾರು ಅರ್ಧ ಗಂಟೆ ಗುಂಡಿನ ದಾಳಿ ನಡೆದಿದೆ. ನಮ್ಮವರು ನೆಲಕ್ಕೆ ಉರುಳಿದಾಗ ಸರಪಂಚನ ಬೆಂಬಲಿಗರು ದೊಣ್ಣೆಯಿಂದ ಬಡಿಯತೊಡಗಿದರು. ಅವರು ಗನ್ ತಂದಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆಯೇ ನಾವು ಚಲ್ಲಾಪಿಲ್ಲಿಯಾಗಿ ಓಡಿದೆವು. ಸುಮಾರು 1 ಗಂಟೆಯ ಬಳಿಕ ಪೊಲೀಸರು ಸ್ಥಳಕ್ಕೆ ಬಂದರು’’ ಎಂದು ಗಾಯಾಳು ಮಹಿಳೆಯೊಬ್ಬರು ಹೇಳಿದ್ದಾರೆ.

ಇಷ್ಟೊಂದು ಭೀಕರ ಹತ್ಯಾಕಾಂಡ ನಡೆದಿದ್ದರೂ ಮುಖ್ಯಮಂತ್ರಿ ಆದಿತ್ಯನಾಥ್ ಇದೊಂದು ಭಾರೀ ರಾಜಕೀಯ ಷಡ್ಯಂತ್ರ ಎಂದು ಹೇಳಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯನ್ನು ತಡೆದು, ಬಂಧಿಸಿರುವುದನ್ನೂ ಸ್ಥಳೀಯರು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News