'ನಾಗೇಶ್ ಪಡು ಮೃತ್ಯು' ಜಿಲ್ಲಾಡಳಿತಕ್ಕೆ ಎಚ್ಚರಿಕೆ ಗಂಟೆಯಾಗಲಿ: ಫಾರೂಕ್ ಉಳ್ಳಾಲ್

Update: 2019-07-22 17:27 GMT

ಮಂಗಳೂರು : ಮಿತಭಾಷಿ , ನಗು ಮುಖದ ಸುಂದರ ತರುಣ ನಾಗೇಶರ ನಿಧನ, ಅಘಾತವಷ್ಟೇ ಅಲ್ಲ, ನಮ್ಮ ವ್ಯವಸ್ಥೆಯ ಅಚಾತುರ್ಯ ಮತ್ತು ಉದಾಸೀನತೆಯ ಬಗ್ಗೆ ಅಪರಾಧ ಪ್ರಜ್ಞೆ ಕಾಡುತ್ತದೆ. ಈ ಸಾವಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯ ವೈಫಲ್ಯವೂ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ತಮ್ಮ ಸಂತಾಪ ಪ್ರಕಟನಾ ಹೇಳಿಕೆ ತಿಳಿಸಿದ್ದಾರೆ.

ಲೋಕದ ಸರಿ-ತಪ್ಪುಗಳನ್ನು ಸಾಕೆನ್ನಿಸುವಷ್ಟು ಬಾರಿ ಹೇಳುತ್ತಲೇ ಇರುವ ಮಾಧ್ಯಮಗಳು ಅದರಲ್ಲೂ ನಾಗೇಶ್ ಉದ್ಯೋಗದಲ್ಲಿದ್ದ 'ದೃಶ್ಯ ಮಾಧ್ಯಮ'ಕ್ಕೆ(ಗಳಿಗೆ) ಊರಿಗೆ ಮಹಾ ಮಾರಿಯಂತೆ ವಕ್ಕರಿಸಿರುವ 'ಡೆಂಗ್ ಜ್ವರ' ದ ಜಾಗೃತಿ ಮೂಡಿಸಲು, ಸಂಬಂಧ ಪಟ್ಟ ಇಲಾಖೆಯನ್ನು ಎಚ್ಚರಿಸಲು ಸಕಾಲಿಕ ಕಾರ್ಯಕ್ರಮ ನೀಡಬೇಕೆಂದು ಅನಿಸದೇ ಹೋದದ್ದು, 'ದೀಪದ ಕೆಳಗೆ' ಕತ್ತಲೆಯಾಗಿರುತ್ತದೆ ಎನ್ನುವಂತಾಗಿದೆ ನಿಜಕ್ಕೂ ಇದು ದುರಂತವೇ ಸರಿ. ಖಂಡನಾರ್ಹ ಕೂಡಾ.

ಇನ್ನಾದರೂ, ಸ್ಥಳೀಯವಾಗಿಯಾದರೂ ಮಾಧ್ಯಮಗಳು ವೃತ್ತಿ ಬಾಂಧವರ ಕ್ಷೇಮ, ತಮ್ಮ ಕರ್ತವ್ಯ ಎಂದು ಪರಿಗಣಿಸುವಂತಾಗಲಿ‌ ಎಂದು ಮಾಧ್ಯಮ ವ್ಯವಸ್ಥಾಪಕರನ್ನು ಒತ್ತಾಯಿಸಿರುವ ಫಾರೂಕ್ ಉಳ್ಳಾಲ್, ಮಾಧ್ಯಮ ಮಿತ್ರನ ಬಲಿದಾನ, ಡೆಂಗ್ಯೂ ಎಂಬ ಮಾರಕ ರೋಗವನ್ನು ಕನಿಷ್ಠ ಪಕ್ಷ ಕರಾವಳಿಯ ಮಟ್ಟಿಗಾದರೂ ಮೂಲೋತ್ಪಾಟನೆ ಮಾಡಲು ಜಿಲ್ಲಾಡಳಿತಕ್ಕೆ ಪ್ರೇರಣೆಯಾಗಲಿ ಎಂದೂ ಆಗ್ರಹಿಸಿದ್ದಾರಲ್ಲದೆ, ಗೆಳೆಯನ 'ರೋಗ ಶಮನ'ಕ್ಕಾಗಿ ಹೆಗಲೆಣೆಯಾಗಿ ಸ್ಪಂದಿಸಿದ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ತತ್ಪರತೆಯನ್ನು ಅಭಿನಂದಿಸಿ, ಪತ್ರಕರ್ತರ ಜಾಗೃತ ಮನಸ್ಸು, ನಾಡ ಸೌಖ್ಯ ಕಟ್ಟಲು ಇನ್ನಷ್ಟು ಸೇವಾನಿರತ ವಾಗಲಿ ಎಂದು ಆಶಿಸಿದ್ದಾರೆ.

ಇನ್ನಷ್ಟು ಕಾಲ ಬದುಕಿ ಬಾಳ ಬೇಕಾದ ಮನೆ ಮಗನ ಅಕಾಲಿಕ ಅಗಲಿಕೆಯ ಆಘಾತವನ್ನು ಸಹಿಸುವ ಸಹನಾ ಶಕ್ತಿಯನ್ನು ದೇವರು ನಾಗೇಶ್ ರ ಕುಟುಂಬಕ್ಕೆ  ದಯಾಪಾಲಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿಯನ್ನೂ ಕರುಣಿಸಲಿ ಎಂದೂ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News