ಭಾರತದಲ್ಲಿ ಕ್ರಿಪ್ಟೊಕರೆನ್ಸಿ ನಿಷೇಧಕ್ಕೆ ಶಿಫಾರಸು

Update: 2019-07-22 17:45 GMT

ಹೊಸದಿಲ್ಲಿ, ಜು.22: ದೇಶದಲ್ಲಿ ಕ್ರಿಪ್ಟೊಕರೆನ್ಸಿ ನಿಷೇಧ ಹಾಗೂ ಈ ಕರೆನ್ಸಿ ಮೂಲಕ ನಡೆಸುವ ವ್ಯವಹಾರಕ್ಕೆ ದಂಡ ವಿಧಿಸುವ ಬಗ್ಗೆ ಕೇಂದ್ರ ಸರಕಾರದ ಅಂತರ್ ಸಚಿವಾಲಯದ ಸಮಿತಿ ಶಿಫಾರಸು ಮಾಡಿದ್ದು, ಸಮಿತಿಯ ವರದಿ ಹಾಗೂ ಕರಡು ಮಸೂದೆಯನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ.

ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಈ ರೀತಿಯ ಡಿಜಿಟಲ್ ಕರೆನ್ಸಿ ವ್ಯವಹಾರ ನಡೆಯುತ್ತಿದ್ದು 2009ರಲ್ಲಿ ಆರಂಭವಾದ ಬಿಟ್‌ಕಾಯಿನ್ ಅತ್ಯಂತ ಪರಿಚಿತ ಕ್ರಿಪ್ಟೊಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿ ವಿನಿಮಯ ಮಾಡಿಕೊಂಡು ಇತರ ವಸ್ತುಗಳನ್ನು ಖರೀದಿಸಲಾಗುತ್ತಿದ್ದು ಬಹುತೇಕ ಡಿಜಿಟಲ್ ಕರೆನ್ಸಿಗಳು ಅನಿಯಂತ್ರಿಕ ಕರೆನ್ಸಿಗಳಾಗಿವೆ. ಡಿಜಿಟಲ್ ಕರೆನ್ಸಿ ವ್ಯವಹಾರದಲ್ಲಿರುವ ಅಪಾಯ ಹಾಗೂ ಇದರ ವೌಲ್ಯಗಳಲ್ಲಿರುವ ಚಂಚಲತೆಯನ್ನು ಪರಿಗಣಿಸಿ ಭಾರತದಲ್ಲಿ ಕ್ರಿಪ್ಟೊಕರೆನ್ಸಿ ನಿಷೇಧ ಹಾಗೂ ಇಂತಹ ವ್ಯವಹಾರದಲ್ಲಿ ನಿರತರಾಗಿರುವವರಿಗೆ ದಂಡ ವಿಧಿಸಲು ಶಿಫಾರಸು ಮಾಡಲಾಗಿದೆ.

 ಅಲ್ಲದೆ ಅಧಿಕೃತ ಡಿಜಿಟಲ್ ಕರೆನ್ಸಿ ಹೊಂದುವ ಬಗ್ಗೆ ಸರಕಾರ ಮುಕ್ತ ಮನಸ್ಸು ಮಾಡಬೇಕು. ಮತ್ತು ವರದಿಯಲ್ಲಿ ಉಲ್ಲೇಖಿಸಲಾದ ವಿಷಯಗಳ ಬಗ್ಗೆ ನಿರ್ಧರಿಸಲು ಸ್ಥಾಯಿ ಸಮಿತಿಯೊಂದನ್ನು ರಚಿಸಬೇಕು ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. 2017ರ ನವೆಂಬರ್‌ನಲ್ಲಿ ರಚನೆಯಾಗಿರುವ ಈ ಸಮಿತಿಯಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ, ಸಿಬಿ(ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ)ಯ ಅಧ್ಯಕ್ಷ ಹಾಗೂ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News