ಬಂಟ್ವಾಳದಲ್ಲಿ 44 ಡೆಂಗ್ ಪ್ರಕರಣಗಳು ಪತ್ತೆ: ಡಾ. ದೀಪಾ ಪ್ರಭು

Update: 2019-07-23 12:27 GMT

ಬಂಟ್ವಾಳ, ಜು. 23: ತಾಲೂಕಿನಲ್ಲಿ ಒಟ್ಟು 44 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ 4 ಶಂಕಿತ ಡೆಂಗ್ ಹಾಗೂ 40 ಡೆಂಗ್ ಪ್ರಕರಣಗಳು ಖಚಿತಗೊಂಡಿವೆ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ವೈರಲ್ ರೋಗಗಳ ಬಗ್ಗೆ 'ವಾರ್ತಾಭಾರತಿ' ಜೊತೆ ಮಾತನಾಡಿದ ಅವರು, ಈ ಮೊದಲು ಖಚಿತ 39 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದವು. ಇಂದು 1 ಪ್ರಕರಣ ಖಚಿತಗೊಂಡು 40 ಮಂದಿ ಡೆಂಗ್ ಬಾಧಿತರಾಗಿದ್ದಾರೆ. ಪ್ರಕರಣದ 39 ಮಂದಿಯು ಗುಣಮುಖರಾಗುತ್ತಿದ್ದಾರೆ. ಜು. 23ರ ಮಧ್ಯಾಹ್ನದ ವೇಳೆಗೆ ಪರ್ಲಿಯಾದಲ್ಲಿ 2 ಹಾಗೂ ತುಂಬೆಯಲ್ಲಿ 2 ಶಂಕಿತ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ದಿನಗಳಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿಯೇ ಐದಾರು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯಾಧಿಕಾರಿ ಹೇಳಿದರು.

ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 8, ವಿಟ್ಲದಲ್ಲಿ 4 ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 6 ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ ಒಂದರಂತೆ ಇವು ಬಂಟ್ವಾಳ ತಾಲೂಕಿನಲ್ಲಿ ವರದಿಯಾಗಿರುವ ಡೆಂಗ್ ಪ್ರಕರಣಗಳು. ವಿವಿಧ ತಾಲೂಕಿನಲ್ಲಿ ಡೆಂಗ್ ಪೀಡಿತರಾಗಿ ಬಂಟ್ವಾಳದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಆಯಾ ತಾಲೂಕು ಇಲಾಖೆ ವರದಿ ಮಾಡಲಿದೆ ಎಂದು ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಅಧಿಕವಾಗುತ್ತಿದ್ದು, ಈ ಕುರಿತು ಎಚ್ಚರವಹಿಸುವಂತೆ ಈಗಾಗಲೇ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹಾಗೂ ಡೆಂಗ್ ಪೀಡಿತರ ಮನೆಯ ಸುತ್ತಮುತ್ತಲಲ್ಲಿ ಶುಚಿತ್ವಕ್ಕಾಗಿ ಮನವಿ ಮಾಡಲಾಗಿದ್ದು, ಸಮುದಾಯ ಸಹಭಾಗಿತ್ವದಿಂದಷ್ಟೇ ರೋಗನಿಯಂತ್ರಣ ಸಾಧ್ಯ ಎಂದಿದ್ದಾರೆ. ಮಲೇರಿಯಾ ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿದ್ದು, ಈ ತಿಂಗಳಲ್ಲಿ ವೈರಲ್ ಜ್ವರದಂಥ ಪ್ರಕರಣಗಳು ವರದಿಯಾಗಿವೆ ಎಂದವರು ಮಾಹಿತಿ ನೀಡಿದ್ದಾರೆ.

''ತಾಲೂಕಿನಲ್ಲಿ ವರದಿಯಾಗಿರುವ ಡೆಂಗ್ ಪ್ರಕರಣಗಳ ಕುರಿತು ಆರೋಗ್ಯಾಧಿಕಾರಿಯವರಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಡೆಂಗ್ ಪೀಡಿತರು ಗುಣಮುಖರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದಲ್ಲದೆ, ಮಾರಣಾಂತಿಕ ಡೆಂಗ್ ಬಗ್ಗೆ ಜನ ಸಾಮಾನ್ಯರಿಗೆ ಸೂಕ್ತ ಮಾಹಿತಿ ನೀಡಿ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.''

-ರಾಜೇಶ್ ನಾಯ್ಕ್, ಬಂಟ್ವಾಳ ಶಾಸಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News