‘ಓದುವ ಹವ್ಯಾಸದಿಂದ ಜ್ಞಾನಾರ್ಜನೆ, ವ್ಯಕ್ತಿತ್ವ ನಿರ್ಮಾಣ ಸಾಧ್ಯ’

Update: 2019-07-23 12:50 GMT

ಉಡುಪಿ, ಜು.23: ಓದುವ ಹವ್ಯಾಸದಿಂದ ಜ್ಞಾನಾರ್ಜನೆಯ ಜೊತೆಗೆ ಉತ್ತಮ ವ್ಯಕ್ತಿತ್ವದ ನಿರ್ಮಾಣ ಸಾಧ್ಯ. ಬಾಲ್ಯದಲ್ಲಿಯೇ ವಿದ್ಯಾರ್ಥಿಗಳು ಓದುವ ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ, ನಾಯಕರಾಗಿ ಬೆಳೆಯಬಹುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ ಹೇಳಿದ್ದಾರೆ.

ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ಕೇಂದ್ರ ಗ್ರಂಥಾಲಯದಲ್ಲಿ ಜೂ.19ರಿಂದ ಜು.19ರವರೆಗೆ ಹಮ್ಮಿಕೊಂಡ ಓದುವ ತಿಂಗಳು ಕಾರ್ಯ ಕ್ರಮ ಹಾಗೂ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಒಂದು ಕಾಲದಲ್ಲಿ ಪ್ರಪಂಚದ ಆಗುಹೋಗುಗಳನ್ನು ಪತ್ರಿಕೆಗಳ ಮೂಲಕ ಓದಿ ಅರಿಯುವ ಪರಿಸ್ಥಿತಿಯಿತ್ತು. ಆದರೆ ಇದು ಮೊಬೈಲ್‌ಯುಗ. ಎಲ್ಲ ಮಾಹಿತಿಗಳೂ ಕ್ಷಣದಲ್ಲಿ ಅಂಗೈಯೊಳಗೇ ಸಿಗುವ ತಂತ್ರಜ್ಞಾನದ ಕಾಲ. ಆದರೆ ಮೊಬೈಲ್‌ನಲ್ಲಿಯೇ ಕಳೆದುಹೋಗುವುದಕ್ಕಿಂತ ಉತ್ತಮ ಪುಸ್ತಕ ಗಳನ್ನು ಓದಿ, ಉತ್ತಮ ವಿಚಾರಗಳನ್ನು ಅರಿತುಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದವರು ತಿಳಿಸಿದರು.

ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯೆ, ಉತ್ತಮ ಗ್ರಂಥಗಳ ಓದು, ಹಿರಿಯರ ಮಾರ್ಗದರ್ಶನ ನೀಡಿ ಅವರನ್ನು ರಾಷ್ಟ್ರದ ಸಂಪತ್ತನ್ನಾಗಿ ಮಾಡುವ ಜವಾಬ್ದಾರಿ ಹೆತ್ತವರ ಮೇಲಿದೆ. ದೊಡ್ಡ ದೊಡ್ಡ ಜ್ಞಾನಿಗಳೆಲ್ಲಾ ಓದಿನಿಂದಲೇ ಖ್ಯಾತಿ ಪಡೆದವರು ಎಂದರು.

ಗ್ರಂಥಾಲಯ ಅರಿವಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ, ಅಜ್ಞಾನದಿಂದ ಪ್ರಕಾಶದ ಕಡೆಗೆ ಸಾಗಲು ಪುಸ್ತಕ ಒಂದು ಮಾಧ್ಯಮ.ಓದು ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯವಿದ್ದ ಹಾಗೆ. ಇದರ ಮೇಲೆ ನಮ್ಮ ಭವಿಷ್ಯ, ನಮ್ಮ ಭವಿಷ್ಯದ ಮೇಲೆ ದೇಶದ ಭವಿಷ್ಯ ರೂಪುಗೊಳ್ಳುತ್ತದೆ. ಇದು ಜ್ಞಾನವನ್ನು ಅರಳಿಸಿ, ಚಿಂತನೆಯನ್ನು ಬೆಳೆಸುತ್ತದೆ. ಈ ಮೂಲಕ ದೇಶ ಬೌದ್ಧಿಕ, ಆರ್ಥಿಕವಾಗಿ ಶ್ರೀಮಂತವಾಗುತ್ತದೆ ಎಂದರು.

ನಗರಸಭೆಯ ವ್ಯವಸ್ಥಾಪಕ ವೆಂಕಟರಮಣ ಉಪಸ್ಥಿತರಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಸ್ವಾಗತಿಸಿದರು, ಪ್ರಥಮ ದರ್ಜೆ ಸಹಾಯಕಿ ಪ್ರೇಮ ಎಂ. ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News