ಹಸಿವು ನೀಗಿಸದ ಹೊರತು ಭಾರತ ಮಾತೆಗೆ ಜೈ ಅಂದರೆ ಏನು ಪ್ರಯೋಜನ ?: ಗೀತಾ

Update: 2019-07-23 13:05 GMT

ಮಂಗಳೂರು,ಜು.23: ಅಂಗನವಾಡಿ ಕಾರ್ಯಕರ್ತೆಯರಿಗೆ, ಬೀಡಿ ಕಟ್ಟುವ ಮಹಿಳೆಯರಿಗೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಸಿಗದೆ ಉನ್ನಲು ಅನ್ನ ಇಲ್ಲದ ಕಾರಣ ಮನೆಮಂದಿ ಕಷ್ಟ ಪಡುತ್ತಿದ್ದಾರೆ. ಹಾಗಿರುವಾಗ ಭಾರತ ಮಾತೆಗೆ ಜೈ ಅಂದರೆ ಏನು ಪ್ರಯೋಜನ ?. ಆ ಜೈಕಾರ ಭಾರತ ಮಾತೆ ಸ್ವೀಕರಿಸುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ.ಗೀತಾ ಹೇಳಿದರು.

‘ಹಿಂಸೆ ಮುಕ್ತ ಸ್ವಾವಲಂಬಿ, ಸೌಹಾರ್ದ ಬದುಕಿಗಾಗಿ’ ನಗರದ ಎನ್‌ಜಿಒ ಸಭಾಂಗಣದಲ್ಲಿ ಮಂಗಳವಾರ ನಡೆದ ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.

ರೈತರ ಸಂಕಷ್ಟ, ನಿರುದ್ಯೋಗ, ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ರಾಜೀನಾಮೆ ಕೊಡಬೇಕಾದ ಸಚಿವರು ಹಣದ ಆಸೆಗೆ ಅಧಿಕಾರಕ್ಕಾಗಿ ರಾಜೀನಾಮೆ ಕೊಡುತ್ತಿದ್ದಾರೆ. ರಾಜಕಾರಣಿಗಳು ಏನು ಮಾಡಿದರೂ ನಡೆಯುತ್ತದೆ ಎನ್ನುವ ರೀತಿ ಪ್ರಜಾಪ್ರಭುತ್ವದ ದುರುಪಯೋಗ ಮಾಡುತ್ತಿದ್ದಾರೆ ಎಂದ ಗೀತಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಪಡೆದವರ ಮೇಲೆ ಹಲವು ಕೇಸುಗಳಿವೆ. ಇಂತಹ ಲೂಟಿಕೋರರಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ಚಳುವಳಿಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷೆ ಜಯಂತಿ ಬಿ.ಶೆಟ್ಟಿ, ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟಲು ಸಂಘಟಿತರಾಗಬೇಕು. ಮಹಿಳೆ ಯಾವುದೇ ಧರ್ಮ ಮತ್ತು ಜಾತಿಯಾದರೂ ಕೂಡ ಶೋಷಣೆ ಒಂದೇ ರೀತಿಯಾಗಿರುತ್ತದೆ ಎಂದರು.

ವೇದಿಕೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪದ್ಮಾವತಿ ಶೆಟ್ಟಿ, ಕಿರಣ್ ಪ್ರಭಾ, ಭಾರತಿ ಬೋಳಾರ್, ಹೇಮಲತಾ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾ ಸ್ವಾಗತಿಸಿದರು. ಖಜಾಂಚಿ ವಿಲಾಸಿನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News