ಉಡುಪಿ: ಎಸ್ಪಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಪೊಲೀಸ್ !

Update: 2019-07-23 13:12 GMT
ಸಾಂದರ್ಭಿಕ ಚಿತ್ರ

ಕೋಟ : ಹಣ ಪಡೆದು ಅಕ್ರಮ ಜಾನುವಾರು ಸಾಗಾಟ ಮತ್ತು ಕಳವಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮಲ್ಪೆ ಕರಾವಳಿ ಕವಾಲು ಪಡೆಯ ಹೆಡ್‌ ಕಾನ್‌ಸ್ಟೇಬಲ್ ಸಂತೋಷ್ ಶೆಟ್ಟಿ(37) ಇಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬ್ರಹ್ಮಾವರ ನಿವಾಸಿಯಾಗಿರುವ ಸಂತೋಷ್ ಶೆಟ್ಟಿ ಮಧ್ಯಾಹ್ನ 1.45ರ ಸುಮಾರಿಗೆ ಆದಿ ಉಡುಪಿಯಲ್ಲಿ ತನ್ನ ಕಾರಿನಲ್ಲಿ ನಿದ್ರೆ ಮಾತ್ರೆಗಳನ್ನು ಸೇವನೆ ಮಾಡಿ, ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಂದೇಶ ಕಳುಹಿಸಿದ್ದಾನೆನ್ನಲಾಗಿದೆ. ಕೂಡಲೇ ಎಸ್ಪಿಯವರು ಇತರ ಅಧಿಕಾರಿಗಳಿಗೆ ಮಾಹಿತಿ ನೀಡಿ ಆದಿಉಡುಪಿ ಕಾರಿನಲ್ಲಿ ಬಿದ್ದುಕೊಂಡಿದ್ದ ಸಂತೋಷ್ ಶೆಟ್ಟಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ಮಾಹಿತಿ ದೊರಕಿದೆ.

ಹಣ ಪಡೆದು ಅಕ್ರಮ ಜಾನುವಾರು ಸಾಗಾಟ ಮತ್ತು ಕಳವಿಗೆ ಅನುವು ಮಾಡಿ ಕೊಡುತ್ತಿದ್ದ ಆರೋಪದಲ್ಲಿ ಸಂತೋಷ್ ಶೆಟ್ಟಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕುಮಟಾದ ವಿನೋದ್ (37) ಎಂಬವರನ್ನು ಕೋಟ ಪೊಲೀಸರು ಜು.16ರಂದು ರಾತ್ರಿ ವೇಳೆ ಬಂಧಿಸಿದ್ದರು. ಅಲ್ಲದೆ ಇದರಲ್ಲಿ ಮತ್ತೆ ನಾಲ್ವರು ಪೊಲೀಸರು ಭಾಗಿಗಳಾಗಿದ್ದು, ಅವರೆಲ್ಲ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News