ಉಡುಪಿ ರೈಲ್ವೆ ನಿಲ್ದಾಣದಲ್ಲಿ ‘ಜನಜಲ್’ ಕುಡಿಯುವ ನೀರಿನ ಯಂತ್ರ ಉದ್ಘಾಟನೆ

Update: 2019-07-23 14:58 GMT

ಉಡುಪಿ, ಜು.23: ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರು ಒದಗಿಸುವ ನಿಟ್ಟಿನಲ್ಲಿ ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಶುದ್ಧ ನೀರಿನ ಘಟಕ ‘ಜನಜಲ್’ ವಾಟರ್ ವೆಂಡಿಂಗ್ ಮೆಶಿನ್‌ನ್ನು ಸ್ಥಾಪಿಸಲಾಗುತ್ತಿದ್ದು, ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕದ ಪ್ರಥಮ ಘಟಕಕ್ಕೆ ಇಂದು ಚಾಲನೆ ನೀಡಲಾಯಿತು.

ಸುಮಾರು 81ಲಕ್ಷ ರೂ. ವೆಚ್ಚದ ಈ ಘಟಕವನ್ನು ಹಿರಿಯ ಪ್ರಯಾಣಿಕರಾದ ವೃಂದಾ ಬಿಜೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಮಂಗಳೂರು ಇದರ ಸಹಾಯಕ ಟ್ರಾಫಿಕ್ ವ್ಯವಸ್ಥಾಪಕ ದರ್ಶನ್ ಠಾಕೂರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಗುತ್ತಿಗೆ ಸಂಸ್ಥೆ ದೆಹಲಿಯ ಸುಪ್ರಿಮಸ್ ಡೆವಲಪರ್ಸ್‌ನ ಪ್ರೊಜೆಕ್ಟ್ ಕೋಆಡಿನೇಟರ್ ಶಾ ನವಾಝ್ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 59 ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಈ ಯಂತ್ರವನ್ನು ಸ್ಥಾಪಿಸಲಾಗುತ್ತಿದ್ದು, ಕರ್ನಾಟಕದ 21 ನಿಲ್ದಾಣಗಳ ಪೈಕಿ ಉಡುಪಿ ನಿಲ್ದಾಣದಲ್ಲಿ ಆರಂಭಿಸಿರುವುದು ಪ್ರಥಮ ಘಟಕ ಆಗಿದೆ. ಮುಂದೆ ಕುಂದಾಪುರ, ಬೈಂದೂರು ನಿಲ್ದಾಣಗಳಲ್ಲಿ ಈ ಘಟಕ ಆರಂಭಗೊಳ್ಳಲಿದೆ. ಈ ಯಂತ್ರಗಳನ್ನು ಸ್ಥಾಪಿಸಲು ದೆಹಲಿಯ ಸುಪ್ರಿಮಸ್ ಡೆವಲಪರ್ಸ್‌ಗೆ ಗುತ್ತಿಗೆ ವಹಿಸಿಕೊಡಲಾಗಿದೆ.

ಈ ಯಂತ್ರಕ್ಕೆ ನಾಣ್ಯ ಹಾಕಿ ಅಥವಾ ವಿವಿಧ ಆ್ಯಪ್‌ಗಳ ಮೂಲಕ ಸ್ಕಾನ್ ಮಾಡಿ ಆನ್‌ಲೈನ್ ಮೂಲಕ ಕೂಡ ಪಾವತಿಸಬಹುದಾಗಿದೆ. ತಮ್ಮದೆ ಬಾಟಲಿಯಲ್ಲಿ ಒಂದು ರೂ.ಗೆ 300ಮಿ.ಲೀಟರ್, ಮೂರು ರೂ.ಗೆ 500 ಮೀ.ಲೀಟರ್, 5ರೂ.ಗೆ ಒಂದು ಲೀಟರ್, 8ರೂ.ಗೆ 2ಲೀಟರ್ ಮತ್ತು 20ರೂ.ಗೆ 5ಲೀಟರ್ ನೀರನ್ನು ಪಡೆಯಬಹುದಾಗಿದೆ. ಗ್ಲಾಸ್ ಮೂಲಕ ನೀರು ಕುಡಿಯುವವರು ಎರಡು ರೂ. ಪಾವತಿಸಬೇಕು.

ಈ ಯಂತ್ರದಲ್ಲಿ ನೀರು ಶುದ್ಧವಾಗಿರಲು ಯು.ವಿ. ಮತ್ತು ಯು.ಎಫ್. ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಯಂತ್ರ ದಿನದ 24 ಗಂಟೆಗಳ ಕಾಲ ಕೂಡ ಪ್ರಯಾಣಿಕರಿಗಾಗಿ ಕಾರ್ಯಾಚರಿಸುತ್ತಿರುತ್ತದೆ ಎಂದು ಕೊಂಕಣ ರೈಲ್ವೆಯ ಮಂಗಳೂರು ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News