ಉಡುಪಿ ನಗರದ ಹಲವೆಡೆ ಕೃತಕ ನೆರೆ: 40 ಮನೆಗಳು ಜಲಾವೃತ

Update: 2019-07-23 15:10 GMT

ಉಡುಪಿ, ಜು.23: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಡುಪಿ ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾ ಗಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಇದರ ಪರಿಣಾಮ ಈ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ನಗರದ ಮೂಡನಿಡಂಬೂರು, ನಿಟ್ಟೂರು, ಗುಂಡಿಬೈಲು ಹಾಗೂ ಶ್ರೀಕೃಷ್ಣ ಮಠದ ಬೈಲಕೆರೆ ಪ್ರದೇಶಗಳಲ್ಲಿ ಸುಮಾರು 30-40 ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇದರಲ್ಲಿ ಕೆಲವು ಮನೆಯವರನ್ನು ಅವರ ಸಂಬಂಧಿಕರ ಮನೆಗೆ ವರ್ಗಾಯಿ ಸಲು ಕ್ರಮಕೈಗೊಳ್ಳಲಾಗಿದೆ.

ಗುಂಡಿಬೈಲು, ಮೂಡನಿಡಂಬೂರು, ನಿಟ್ಟೂರು ಜಲಾವೃತ ಪ್ರದೇಶಗಳಿಗೆ ಇಂದು ಬೆಳಗ್ಗೆ ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಸ್ಥಳೀಯ ನಗರಸಭೆ ಸದಸ್ಯರು ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

30 ಮನೆಗಳು ಜಲಾವೃತ: ಬನ್ನಂಜೆಯ ಮೂಡನಿಡಂಬೂರು ಪರಿಸರ ದಲ್ಲಿ ಸುಮಾರು 20-30 ಮನೆಗಳು ಜಲಾವೃತಗೊಂಡಿದ್ದು, ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಇಡೀ ಪರಿಸರ ಸಂಪರ್ಕ ಕಡಿದುಕೊಂಡಿದೆ.

ಕಲ್ಸಂಕ ತೋಡಿನಿಂದ ಹರಿದು ಬರುವ ತ್ಯಾಜ್ಯ ಸಹಿತ ನೀರು ಇಡೀ ಮೂಡ ನಿಡಂಬೂರು ಪ್ರದೇಶವನ್ನು ಆವರಿಸಿಕೊಂಡಿದ್ದು, ಇದರಿಂದ ಪರಿಸರ ದುರ್ವಾ ಸನೆ ಬೀರುತ್ತಿದೆ. ಜು.22ರ ತಡರಾತ್ರಿ ವೇಳೆ ನೀರು ಮನೆ ಆವರಣ ಹಾಗೂ ಒಳಗೆ ನುಗ್ಗಲು ಆರಂಭಿಸಿದ್ದು, ಬೆಳಗಿನ ಜಾವ ಸಂಪೂರ್ಣ ನೀರು ತುಂಬಿ ರುವುದು ಕಂಡುಬಂತು.

ಮೂಡನಿಡಂಬೂರು ನಾಗಬ್ರಹ್ಮಸ್ಥಾನದ ಸಮೀಪದಲ್ಲಿರುವ ತಮಿಳು ಮೂಲದ ನದೇಶ್, ಸೌಡಯ್ಯ, ಮಹೇಂದ್ರನ್, ಬಳ್ಳಾರಿ ಮೂಲದ ಹೊನ್ನಮ್ಮ ಸಹಿತ ಏಳೆಂಟು ಮನೆಗಳ ಆವರಣದೊಳಗೆ ನೀರು ನುಗ್ಗಿದೆ. ಇಲ್ಲಿನ ಶ್ರೀಬ್ರಹ್ಮ ಬೈದರ್ಕಳ ಗರಡಿ ಪರಿಸರದ ಗಂಗಾಧರ ಪೂಜಾರಿ, ರಾಧು ಪೂಜಾರ್ತಿ, ಗರಡಿ ಮನೆಯ ವಿಶ್ವನಾಥ್, ಸುಧಾಕರ ಶೆಟ್ಟಿ, ದಿವಾಕರ ಶೆಟ್ಟಿ, ಮೂಡನಿಡಂಬೂರು ಪಡುಮನೆಯ ಸುಂದರ್ ಸೇರಿದಂತೆ ಸುಮಾರು 20 ಮನೆಗಳ ಕುಟುಂಬಗಳು ಕೃತಕ ನೆರೆಯ ನೀರಿನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನೆರೆಯ ನೀರಿನಿಂದ ಕೆಲವು ಮನೆಯವರಿಗೆ ಹೊರಗಡೆ ಕಾಲಿಡದಂತೆ ದ್ವೀಪದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳನ್ನು ಹೊರ ತೆಗೆಯಲು ಸಾಧ್ಯ ವಾಗದೆ ಸ್ಥಳೀಯ ಯುವಕರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಉಳಿದು ಕೊಂಡಿದ್ದಾರೆ. ರಾತ್ರಿಯಿಂದ ಮನೆಯೊಳಗೆ ನೀರು ಬಂದಿರುವುದರಿಂದ ಹಲವು ಕುಟುಂಬಗಳು ನಿದ್ದೆ ಇಲ್ಲದ ರಾತ್ರಿಯನ್ನು ಕೆದಿವೆ.

ನಗರಸಭೆ ವಿರುದ್ಧ ಆಕ್ರೋಶ: ಈ ಕೃತಕ ನೆರೆಗೆ ಉಡುಪಿ ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣ ಎಂದು ಮೂಡನಿಡಂಬೂರು ಪ್ರದೇಶದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯವರು ಒಳಚರಂಡಿ ಪೈಪ್ ಮೂಡನಿಡಂಬೂರಿನ ತೋಡಿಗೆ ಅಡ್ಡವಾಗಿ ಹಾದು ಹೋಗುವಂತೆ ಮಾಡಿರುವ ಪರಿಣಾಮ ಇಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಆಗುತ್ತಿಲ್ಲ. ಅಲ್ಲದೆ ಕಸ ಕಡ್ಡಿಗಳು ಈ ಪೈಪ್ ಗಳ ಎಡೆಯಲ್ಲಿ ಅಡ್ಡವಾಗಿ ನಿಂತು ನೀರು ಬ್ಲಾಕ್ ಆಗಿದೆ. ಇದರಿಂದ ತೋಡಿನ ನೀರು ಇಡೀ ಪರಿಸರಕ್ಕೆ ವ್ಯಾಪಿಸಿದೆ ಎಂದು ಗಂಗಾಧರ ಪೂಜಾರಿ ಆರೋಪಿಸಿದರು.

ಈ ಹಿಂದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೋಡಿ ನಲ್ಲಿರುವ ಹೂಳು ತೆರವುಗೊಳಿಸಲು ಜೆಸಿಬಿ ವ್ಯವಸ್ಥೆ ಮಾಡಿದ್ದರು. ಆದರೆ ಮಳೆಯ ನೀರು ತುಂಬಿ ಹರಿಯುತ್ತಿರುವುದರಿಂದ ಜೆಸಿಬಿಯಿಂದ ಕಸ, ಹೂಳು ತೆಗೆಯಲು ಸಾಧ್ಯವಾಗಿಲ್ಲ. ಈ ಕೆಲಸವನ್ನು ಇವರು ನವೆಂಬರ್ ತಿಂಗಳಲ್ಲಿ ಮಾಡಬೇಕಾಗಿತ್ತು. ಈಗ ಎಚ್ಚರ ಆಗುತ್ತಿದ್ದಾರೆಂದು ಗರಡಿಮನೆಯ ವಿಶ್ವನಾಥ್ ದೂರಿದರು.

ಕುಟುಂಬಗಳ ಸ್ಥಳಾಂತರ: ಮಳೆಯಿಂದ ನಿಟ್ಟೂರು ಇಡೀ ಪ್ರದೇಶ ನೀರಿ ನಿಂದ ಆವೃತಗೊಂಡಿದ್ದು, ಇದರಿಂದ ನಿಟ್ಟೂರು ಮತ್ತು ದಲಿತ ಕಾಲೋನಿಯ ಒಟ್ಟು ಏಳು ಮನೆಯವರು ತೊಂದರೆಗೆ ಸಿಲುಕಿಗೊಂಡಿದ್ದಾರೆ.

ಸ್ಥಳಕ್ಕೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಲಿಕರ್ ಭೇಟಿ ನೀಡಿ, ಈ ಏಳು ಕುಟುಂಬ ಗಳನ್ನು ಸ್ಥಳಾಂತರಿಸಲು ಕ್ರಮಕೈಗೊಂಡರು. ಇದರಲ್ಲಿ ನಾಲ್ಕೈದು ಮನೆಯವರು ಬೆಲೆಬಾಳುವ ವಸ್ತುಗಳೊಂದಿಗೆ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ.

ಆದರೆ ಉಳಿದ ಮನೆಯವರು ಮನೆ ಬಿಟ್ಟು ತೆರಳಲು ಹಿಂದೇಟು ಹಾಕಿದ್ದು, ಇವರ ಮನೆವೊಲಿಸುವ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಚರಂಡಿ ತ್ಯಾಜ್ಯ ಸಹಿತ ನೆರೆಯ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಭೀತಿಯಲ್ಲಿ ಸ್ಥಳೀಯರಿದ್ದು, ಸಂಬಂಧಪಟ್ಟ ಅಧಿಕಾರಿ ಗಳು ಕೂಡಲೇ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅದೇ ರೀತಿ ಮಳೆಯಿಂದಾಗಿ ಉಡುಪಿಯ ಕೃಷ್ಣ ಮಠದ ಬಳಿ ಹಾಗೂ ಗುಂಡಿಬೈಲು ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕಲ್ಸಂಕ ತೋಡು ತುಂಬಿ ಹರಿಯುತ್ತಿರುವುದರಿಂದ ತೋಡಿನ ಇಕ್ಕೆಲಗಳಲ್ಲಿನ ಬೈಲಕೆರೆ ಪರಿಸರದ ಹಲವು ಮನೆಗಳ ಆವರಣಕ್ಕೆ ನೀರು ನುಗ್ಗಿವೆ. ಗುಂಡಿಬೈಲು ಸಮೀಪದ ಹೆಚ್ಚಿನ ರಸ್ತೆಗಳು ಜಲಾವೃತಗೊಂಡಿದ್ದು, ಮನೆ, ವಲಸೆ ಕಾರ್ಮಿಕರ ಹಲವು ಜೋಪಡಿಗಳ ಒಳಗೆ ನೆರೆಯ ನೀರು ನುಗ್ಗಿದೆ.

ವಾಹನ ಸಂಚಾರ ನಿರ್ಬಂಧ

ಮೂಡನಿಡಂಬೂರು ಹಾಗೂ ನಿಟ್ಟೂರು ಪರಿಸರದಲ್ಲಿ ಕೃತಕ ನೆರೆ ಉಂಟಾಗಿ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವ ಪರಿಣಾಮ ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಗಳು ಮೂಡನಿಡಂಬೂರು ಹಾಗೂ ನಿಟ್ಟೂರಿನ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಯನ್ನು ಕೂಡ ನಿಯೋಜಿಸಿದ್ದಾರೆ. ಅದೇ ರೀತಿ ತುಂಬಿ ಹರಿಯುವ ತೋಡು ಗಳ ಬದಿಗಳಲ್ಲಿ ಅಪಾಯಕಾರಿ ಸೂಚಿಸುವ ಪಟ್ಟಿಯನ್ನು ಹಾಕಲಾಗಿದೆ.

ಬಾಣಂತಿ ಶಿಫ್ಟ್

ಮೂಡನಿಡಂಬೂರು ಗರಡಿಮನೆಯ ವಿಶ್ವನಾಥ್ ಎಂಬವರ ಮನೆಗೆ ರಾತ್ರಿ ನೆರೆಯ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಬಾಣಂತಿ ತಂಗಿ ಸುಷ್ಮಾ ಹಾಗೂ ಅವರ 10 ದಿನದ ಮಗುವನ್ನು ಸಮೀಪದ ಸುಧಾಕರ ಶೆಟ್ಟಿ ಎಂಬವರ ಮನೆಗೆ ಇಂದು ಬೆಳಗ್ಗೆ ಶಿಫ್ಟ್ ಮಾಡಲಾಯಿತು. ಅದೇ ರೀತಿ ಇದೇ ಮನೆ ಯಲ್ಲಿದ್ದ ವೃದ್ಧೆಯೊಬ್ಬರು ಕೂಡ ಆ ಮನೆಗೆ ಕಳುಹಿಸಿ ಕೊಡಲಾಯಿತು.

ನಿಟ್ಟೂರು, ಮೂಡನಿಡಂಬೂರು ಪ್ರದೇಶಗಳಿಗೆ ಭೇಟಿ ನೀಡಿದ್ದು, ಅಪಾಯ ದಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಕ್ರಮ ತೆಗೆದು ಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಅಂತಹ ಕುಟುಂಬಗಳಿಗೆ ಸಮೀಪದ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಿಟ್ಟೂರಿನ ಕೆಲವು ಮನೆಯವರು ಅವರ ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಉಳಿದವರ ಮನವೊಲಿಸಲಾಗುತ್ತಿದೆ.
-ಪ್ರದೀಪ್ ಕುರ್ಡೆಕರ್, ತಹಶೀಲ್ದಾರ್, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News