ಯಕ್ಷಗಾನದಲ್ಲಿ ಜಾತಿ ನಿಂದನೆ; ಮುಂಡಾಳ ಮಹಾಸಭಾ ಖಂಡನೆ

Update: 2019-07-23 15:57 GMT

ಉಡುಪಿ, ಜು.23: ‘ಬ್ರಹ್ಮ ಬಲಾಂಡಿ’ ಎಂಬ ಯಕ್ಷಗಾನ ಪ್ರಸಂಗದಲ್ಲಿ ಮುಂಡಾಳ ಜನಾಂಗ ಹಾಗೂ ಅದರ ಆರಾದ್ಯ ದೇವರಾದ ಬಬ್ಬುಸ್ವಾಮಿಯನ್ನು ನಿಕೃಷ್ಟ, ವಿಕೃತವಾಗಿ ಬಿಂಬಿಸಿ ಮುಂಡಾಳ ಜಾತಿಯವರಿಗೆ ಅವಹೇಳನ ಪದ ವನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಜಾತಿನಿಂದನೆ ಗೈದಿರುವ ಕೃತ್ಯವನ್ನು ಮುಂಡಾಳ ಮಹಾಸಭಾ ಉಗ್ರವಾಗಿ ಖಂಡಿಸಿದೆ.

 ಈ ಬಗ್ಗೆ ಮಂಗಳವಾರ ಪತ್ರಿಕಾಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಉಡುಪಿ ಜಿಲ್ಲಾ ಮುಂಡಾಳ ಮಹಾಸಭಾ, ಸಂಬಂಧ ಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಜಾತಿನಿಂದನೆ ಕೇಸು ದಾಖಲಿಸಿ ಬಂಧಿಸಬೇಕು ಹಾಗೂ ಇನ್ನು ಮುಂದೆ ಯಾರೂ ಕೂಡಾ ಮುಂಡಾಳಜಾತಿ ಮತ್ತು ಕಚ್ಚೂರು ಶ್ರೀಮಾಲ್ತಿ ದೇವಿ ಹಾಗೂ ಶ್ರೀಬಬ್ಬುಸ್ವಾಮಿ ಚರಿತ್ರೆಯನ್ನು ತಿಳಿಯದೇ ತಮಗಿಷ್ಟ ಬಂದಂತೆ ಯಕ್ಷಗಾನ, ನಾಟಕ, ಕಥಾಪುಸ್ತಕ ರಚನೆ ಮಾಡಿದಲ್ಲಿ ಅವುಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

ಅಲ್ಲದೇ ಈ ಮೊದಲೇ ರಚಿಸಿದ ಯಕ್ಷಗಾನ, ನಾಟಕ, ಕಥಾಪುಸ್ತಕಗಳಲ್ಲಿ ಜಾತಿ ನಿಂದನೆ, ಶ್ರೀಮಾಲ್ತಿದೇವಿ ಮತ್ತು ಬಬ್ಬುಸ್ವಾಮಿ ಚರಿತ್ರೆಯನ್ನು ತಿರುಚಿ ರಚಿಸಿದ ಕಥೆಗಳಿದ್ದಲ್ಲಿ ಅವುಗಳನ್ನು ಲೇಖಕರು, ಸಂಪಾದಕರು ಇನ್ನು ಮುಂದೆ ಮಾರಾಟ ಹಾಗೂ ಪ್ರದರ್ಶನ ಮಾಡುವುದು ಕಂಡುಬಂದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮುಂಡಾಳ ಮಹಾಸಭಾದ ಉಡುಪಿ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರ್ ತಿಳಿಸಿದ್ದಾರೆ.

ಈ ಕುರಿತು ನಡೆದ ಮಹಾಸಭಾ ಸಭೆಯಲ್ಲಿ ಗೌರವ ಉಪಾಧ್ಯಕ್ಷ ಬಾಬು ಮಲ್ಲಾರ್, ಗೌರವ ಸಲಹೆಗಾರರಾದ ಗೋಕುಲ್‌ದಾಸ್ ಬಾರ್ಕೂರು, ಉಪಾಧ್ಯಕ್ಷ ಗೋವಿಂದ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಮಾಸ್ತರ್, ಪದಾಧಿಕಾರಿಗಳಾದ ಉದಯ ಆಂಚನ್, ಸಂಜೀವ ಮಾಸ್ತರ್, ನರ್ಸಿ, ಹರಿಶ್ಚಂದ್ರ ಅಮೀನ್, ಚಂದ್ರ ಮಲ್ಲಾರ್, ಸುರೇಶ್ ಉಚ್ಚಿಲ, ಸುರೇಂದ್ರ ಅಮೀನ್, ಸದಾನಂದ, ಯಶವಂತ್ ಮಲ್ಪೆ, ಸಂದೀಪ್, ಸುಧಾಕರ ಮುಂತಾದವರು ಭಾಗವಹಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News