ಪಾಕಿಸ್ತಾನದ ವಂಚನೆಗೆ ಅಮೆರಿಕ ಬಲಿಯಾಗಬಾರದು: ಮಾಜಿ ಪೆಂಟಗನ್ ಅಧಿಕಾರಿ ಎಚ್ಚರಿಕೆ

Update: 2019-07-23 16:10 GMT

ವಾಶಿಂಗ್ಟನ್, ಜು. 23: ದ್ವಿಪಕ್ಷೀಯ ಸಂಬಂಧಗಳಿಗೆ ಮರುಜೀವ ನೀಡುವ ಪಾಕಿಸ್ತಾನದ ಹೊಸ ಪ್ರಯತ್ನಗಳಿಗೆ ಅಮೆರಿಕ ಬಲಿಬೀಳಬಾರದು ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ಮಾಜಿ ಅಧಿಕಾರಿ ಮೈಕಲ್ ರೂಬಿನ್ ಎಚ್ಚರಿಸಿದ್ದಾರೆ.

 ''ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೊಸ ಭಾಗೀದಾರಿಕೆಯನ್ನು ಬಯಸಿಲ್ಲ, ಅವರು ತಮ್ಮ ಎಂದಿನ ನಾಟಕವನ್ನು ಮುಂದುವರಿಸುವ ಉದ್ದೇಶ ಹೊಂದಿದ್ದಾರೆ. ಇದರ ಬೆಲೆಯನ್ನು ನೆರವಿನ ರೂಪದಲ್ಲಿ ವ್ಯರ್ಥವಾದ ಬಿಲಿಯಗಟ್ಟಳೆ ಡಾಲರ್, ಚೀನಾದ ಓಲೈಕೆ ಮತ್ತು ಅಮೆರಿಕದ ಸೈನಿಕರ ದೇಹಗಳನ್ನೊಳಗೊಂಡ ಚೀಲಗಳಲ್ಲಿ ಎಣಿಸಬಹುದಾಗಿದೆ'' ಎಂಬುದಾಗಿ ಅವರು ಅಮೆರಿಕದ ಪತ್ರಿಕೆ 'ದ ನ್ಯಾಶನಲ್ ಇಂಟರೆಸ್ಟ್'ನಲ್ಲಿ ಬರೆದ ಸಂಪಾದಕೀಯದಲ್ಲಿ ಹೇಳಿದ್ದಾರೆ.

''ಶ್ವೇತಭವನಕ್ಕೆ ತಾನು ನೀಡುವ ಭೇಟಿಯು, ಹಲವು ವರ್ಷಗಳ ಉದ್ವಿಗ್ನತೆಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧವನ್ನು ಮುಂದಕ್ಕೊಯ್ಯುತ್ತದೆ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಆಶಿಸಿದ್ದಾರೆ. ಅಮೆರಿಕದ ರಾಜಕೀಯ ಚಿತ್ರಣದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಓರ್ವ ವಿಭಜನವಾದಿ ನಾಯಕ ಹಾಗೂ ಅಂತರ್‌ರಾಷ್ಟ್ರೀಯ ರಂಗದಲ್ಲಿನ ಎಲ್ಲ ಕೆಡುಕುಗಳಿಗೆ ಅವರೇ ಕಾರಣ ಎಂಬುದಾಗಿ ಅವರ ರಾಜಕೀಯ ವಿರೋಧಿಗಳು ಆರೋಪಿಸುತ್ತಾರೆ. ಆದರೆ, ಪಾಕಿಸ್ತಾನದ ವಿಷಯದಲ್ಲಿ ಮಾತ್ರ ಅವರು ಈ ಆರೋಪ ಮಾಡಬಾರದು. ಪಾಕಿಸ್ತಾನದ ಸಮಸ್ಯೆಗಳು ಪಾಕಿಸ್ತಾನದಲ್ಲೇ ಸೃಷ್ಟಿಯಾಗಿವೆ ಹಾಗೂ ಇವುಗಳಿಗೆ ಪಾಕಿಸ್ತಾನವನ್ನೇ ಹೊಣೆಯಾಗಿಸುವ ಇತ್ತೀಚಿನ ದ್ವಿಪಕ್ಷೀಯ ಒಮ್ಮತದ ನಿಲುವನ್ನು ಅವರು ಮುಂದುವರಿಸಬೇಕು'' ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News