‘ವರ್ಷದ ನ್ಯೂಝಿಲ್ಯಾಂಡರ್’ ಪ್ರಶಸ್ತಿ ನಾಮನಿರ್ದೇಶನ ನಿರಾಕರಿಸಿದ ಸ್ಟೋಕ್ಸ್

Update: 2019-07-23 16:46 GMT

 ವೆಲ್ಲಿಂಗ್ಟನ್, ಜು.23: ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕಳೆದ ವಾರ ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಕಿವೀಸ್ ಪ್ರಶಸ್ತಿ ಕನಸನ್ನು ನುಚ್ಚುನೂರು ಮಾಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ವರ್ಷದ ನ್ಯೂಝಿಲ್ಯಾಂಡರ್ ಪ್ರಶಸ್ತಿ ನಾಮನಿರ್ದೇಶನ ಸ್ವೀಕರಿಸಲು ನಿರಾಕರಿಸಿದ್ದಾರೆ.

28ರ ಹರೆಯದ ಸ್ಟೋಕ್ಸ್ ನ್ಯೂಝಿಲ್ಯಾಂಡ್‌ನಲ್ಲಿ ಜನಿಸಿದ್ದರು. ಆದರೆ, ತನ್ನ 12ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದಾರೆ.

 ‘‘ವರ್ಷದ ನ್ಯೂಝಿಲ್ಯಾಂಡರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಮೂಲ ನ್ಯೂಝಿಲ್ಯಾಂಡ್ ಎಂಬ ಹೆಮ್ಮೆ ಇದೆ. ಆದರೆ, ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಹಕ್ಕು ನನಗಿಲ್ಲ. ನ್ಯೂಝಿಲ್ಯಾಂಡ್ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕೆಲವು ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿದ್ದಾರೆ. ಇಂಗ್ಲೆಂಡ್ ವಿಶ್ವಕಪ್ ಜಯಿಸಲು ನಾನು ನೆರವಾಗಿದ್ದೇನೆ. ನನ್ನ ಜೀವನ ಇಂಗ್ಲೆಂಡ್‌ನಲ್ಲಿ ರೂಪುಗೊಂಡಿದೆ. ನಾನು ಇಲ್ಲಿ 12ನೇ ವರ್ಷದಿಂದ ಇದ್ದೇನೆ’’ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೋಕ್ಸ್ ಬರೆದಿದ್ದಾರೆ.

 ಇಡೀ ದೇಶ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ಬೆಂಬಲ ನೀಡಬೇಕಾಗಿದೆ. ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ವಿಭಿನ್ನ ಹಾಗೂ ಗೌರವಪೂರ್ವಕವಾಗಿ ಮುನ್ನಡೆಸಿದ್ದಾರೆ. ಅವರು ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅವರೊಬ್ಬ ಸ್ಫೂರ್ತಿದಾಯಕ ನಾಯಕ. ಎಲ್ಲ ಸನ್ನಿವೇಶದಲ್ಲೂ ನಮ್ರತೆ ಹಾಗೂ ಅನುಭೂತಿ ತೋರಿಸುತ್ತಾರೆ. ವರ್ಷದ ನ್ಯೂಝಿಲ್ಯಾಂಡರ್ ಪ್ರಶಸ್ತಿ ಸ್ವೀಕರಿಸಲು ಕೇನ್ ಅರ್ಹರಿದ್ದಾರೆ. ನ್ಯೂಝಿಲ್ಯಾಂಡ್‌ನ ಪ್ರತಿಯೊಬ್ಬರು ಕೇನ್‌ರನ್ನು ಬೆಂಬಲಿಸಬೇಕು ಎಂದು ಸ್ಟೋಕ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News