ಸರಕಾರ ಪತನದ ಸಂಚಿನ ಹಿಂದೆ 1,000 ಕೋಟಿ ರೂ. ಹಗರಣ: ಯು.ಟಿ. ಖಾದರ್ ಗಂಭೀರ ಆರೋಪ

Update: 2019-07-23 18:08 GMT

ಮಂಗಳೂರು, ಜು.23: ರಾಜ್ಯದ ಮೈತ್ರಿ ಸರಕಾರದ ಪತನದ ಹಿಂದೆ 1,000 ಕೋಟಿ ರೂ.ಗಳ ಹಗರಣವಿದೆ ಎಂದು ಶಾಸಕ ಯು.ಟಿ. ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

‘ವಾರ್ತಾ ಭಾರತಿ’ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕನುಗುಣವಾಗಿ ಆಯ್ಕೆಯಾದ ಸರಕಾರವನ್ನು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು, ಶಾಸಕರನ್ನು ಕೂಡಿಟ್ಟು, ವಾಮಮಾರ್ಗದಿಂದ ಉರುಳಿಸಿದ್ದಾರೆ.  ಇದು 1000 ಕೋಟಿ ರೂ.ಗಳ ಹಗರಣ ಹಾಗು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

"ಪ್ರತಿಯೊಬ್ಬರಿಗೂ 60-70 ಕೋಟಿ ರೂ.ಗಳನ್ನು ನೀಡಲಾಗಿದೆ ಎನ್ನುವ ಮಾಹಿತಿ ನಮಗೆ ಲಭಿಸಿದೆ. ನೋಟು ಅಮಾನ್ಯದಿಂದ ಕಪ್ಪುಹಣ ಕಡಿಮೆಯಾಗದೆ ಎಂದು ಹೇಳುತ್ತಾರೆ. ಆದರೆ, ಈಗ ನೀಡಿರುವ ಹಣ ಕಪ್ಪುಹಣವಲ್ಲದೆ ಮತ್ತೇನು?" ಎಂದು ಪ್ರಶ್ನಿಸಿದರು.

ನಾವು ಅಧಿಕಾರಕ್ಕಾಗಿ ಕೂತವರಲ್ಲ. ನಾವು ಕ್ಷೇತ್ರದ ಜನರ ಕೆಲಸಕ್ಕಾಗಿ ಇರುವವರು. ನಾನು ಇದೆಲ್ಲಕ್ಕಿಂತ ಮೊದಲೇ ರಾಜೀನಾಮೆ ಪತ್ರವನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದೇನೆ. ರಾಜಭವನದಲ್ಲಿ ಅಧಿಕಾರ ಸ್ವೀಕರಿಸುವಾಗ, ಪ್ರಮಾಣವಚನ ಮಾಡಿ ಸಹಿ ಹಾಕುವಾಗ ಎಷ್ಟು ಸಂತೋಷವಾಗಿತ್ತೋ, ಅಷ್ಟೇ ಸಂತೋಷ ಪಕ್ಷಕ್ಕಾಗಿ ರಾಜೀನಾಮೆ ನೀಡುವಾಗ ಆಗಿದೆ. ಜನರ ಆಶೀರ್ವಾದವಿದ್ದರೆ ಮಂತ್ರಿ ಸ್ಥಾನ ಯಾವಾಗಲೂ ಸಿಗಬಹುದು. ಪಕ್ಷ ಕಷ್ಟದಲ್ಲಿದ್ದಾಗ ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡುವ ಅವಕಾಶ ಸಿಗುವುದು ತುಂಬಾ ಕಡಿಮೆ ಎಂದವರು ಹೇಳಿದರು.

ಇನ್ನು ಮುಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ನಾನು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇನೆ. ನಾವು ಪ್ರತಿಪಕ್ಷ ಸ್ಥಾನದಲ್ಲಿದ್ದು ಬಿಜೆಪಿ ಸರಕಾರವನ್ನು ಸಮರ್ಥವಾಗಿ ಎದುರಿಸುತ್ತೇವೆ. ನನ್ನ  ಈ ಅವಧಿಯಲ್ಲಿ ನನ್ನ ಕ್ಷೇತ್ರದ ಎಲ್ಲಾ ರಸ್ತೆಗಳಿಗೆ ಅನುದಾನ, ಸಂಪೂರ್ಣ ಕ್ಷೇತ್ರದ ಕುಡಿಯುವ ನೀರಿನ ಯೋಜನೆ, ಯುಜಿಡಿ ಅನುದಾನವನ್ನು ಸಮರ್ಪಕವಾಗಿ ಬಳಸಿದ್ದೇನೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ, ಸೋಮೇಶ್ವರ ಗ್ರಾಪಂ ಅನ್ನು ಮೇಲ್ದರ್ಜೆಗೇರಿಸಲು ಸಹಕಾರ ನೀಡಿದ ಮುಖ್ಯಮಂತ್ರಿಯವರಿಗೆ, ಉಪಮುಖ್ಯಮಂತ್ರಿಯವರಿಗೆ, ಸಚಿವ ಸಂಪುಟದ ಸದಸ್ಯರಿಗೆ, ನನ್ನ ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ, ಜಿಲ್ಲೆಯ ನಾಗರಿಕರಿಗೆ, ನನ್ನ ಇಲಾಖೆಯ ಅಧಿಕಾರಿ ವರ್ಗದವರಿಗೆ, ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News