ಹಿರಿಯ ಆಗಮಶಾಸ್ತ್ರಜ್ಞ, ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ ನಿಧನ

Update: 2019-07-24 13:18 GMT

ಬ್ರಹ್ಮಾವರ, ಜು. 24: ಹಿರಿಯ ಆಗಮಶಾಸ್ತ್ರಜ್ಞ ಬಾರಕೂರು ಮೂಡುಕೇರಿ ನಿವಾಸಿ ವೇ.ಮೂ.ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ (98) ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪುತ್ರ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಬಿ.ಎಂ.ಸೋಮಯಾಜಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಕೋಟದಲ್ಲಿ ಜನಿಸಿದ ಸೋಮಯಾಜಿ ಅವರು ಆರಂಭದಲ್ಲಿ ಸಾಲಿಗ್ರಾಮ ದಲ್ಲಿದ್ದ ವಾಣಿವಿಲಾಸ ಸಂಸ್ಕೃತ ಪಾಠಶಾಲೆಯಲ್ಲಿ ಓದಿ, ಬಳಿಕ ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ತರ್ಕ ಶಿರೋಮಣಿ ಪದವಿಯನ್ನು ಪಡೆದರು. ಪರಂಪರೆಯಾಗಿ ಬಂದ ಆಗಮಶಾಸ್ತ್ರವನ್ನು ಹಿರಿಯರಿಂದ ಓದಿಕೊಂಡವರು. ಹಿಂದಿ ಪ್ರವೀಣ ಪದವಿ ಪಡೆದ ಸೋಮಯಾಜಿ, ಧರ್ಮಶಾಸ್ತ್ರ ವಿಷಯವನ್ನು ಸ್ವಾಧ್ಯಾಯದಿಂದ ಕಲಿತು ಅದರಲ್ಲಿ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು. ಜ್ಯೋತಿಷ ಶಾಸ್ತ್ರವನ್ನೂ ಬಲ್ಲವರಾಗಿದ್ದರೂ, ಅದನ್ನು ವೃತ್ತಿಯಾಗಿ ಮಾಡಿಕೊಂಡಿ ರಲಿಲ್ಲ. ಹಿರಿಯ ವೇದ ಪಂಡಿತರಾಗಿದ್ದ ಸೋಮಯಾಜಿ ಅವರು ಪುರೋಹಿತರಾಗಿಯೂ, ಪರಿಸರದ ದೇವಸ್ಥಾನಗಳ ಅರ್ಚಕರಾಗಿಯೂ ಇದ್ದರು. ಅನೇಕ ಶಿಷ್ಯರಿಗೆ ವೇದ, ಆಗಮಾಸ್ತ್ರದ ಪಾಠಗಳನ್ನೂ ಹೇಳಿದ್ದರು.

ಬ್ರಹ್ಮಾವರದಿಂದ ಬೈಂದೂರುವರೆಗೆ, ಧಾರೇಶ್ವರ ಸಹಿತ ಉ.ಕ.ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ತಂತ್ರಿಗಳಾಗಿದ್ದ ಸೋಮಯಾಜಿ, ಅನೇಕ ದೇವಸ್ಥಾನಗಳ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವಗಳನ್ನು ನಡೆಸಿ ಅವುಗಳ ಅಭಿವೃದ್ಧಿಗೆ ಕಾರಣರಾಗಿದ್ದರು.

ಉಡುಪಿ ಶ್ರೀಕೃಷ್ಣಮಠ, ಶಿರಸಿ ಶ್ರೀಸ್ವರ್ಣವಲ್ಲೀ ಮಠಗಳಲ್ಲಿ ನಡೆದ ದೃಗ್ಗಣಿತ ಪಂಚಾಂಗ ಮತ್ತಿತರ ಗೋಷ್ಠಿಗಳಲ್ಲಿಯೂ ಪಾಲ್ಗೊಂಡಿದ್ದರು. 115 ವರ್ಷ ಇತಿಹಾಸದ ಉಡುಪಿ ಸಂಸ್ಕೃತ ಕಾಲೇಜಿನ ಅತಿ ಹಿರಿಯ ಹಳೆ ವಿದ್ಯಾರ್ಥಿ ಯಾಗಿದ್ದ ಸೋಮಯಾಜಿ ಅವರು ಶಾಸ್ತ್ರ ವಿಚಾರಗಳಲ್ಲಿ ನಿಷ್ಠುರವಾದಿಯಾಗಿ ಮತ್ತು ಅಧಿಕಾರಾಣಿಯಿಂದ ವಿಚಾರ ಮಂಡಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News