ಉಡುಪಿ: ಸಂಜೀವ ಬಳೆಗಾರಗೆ ಸರ್ಪಂಗಳ ಪ್ರಶಸ್ತಿ
ಉಡುಪಿ, ಜು.24: ಉಡುಪಿಯ ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾನ ಪ್ರತಿವರ್ಷ ಯಕ್ಷಗಾನ ಕಲಾಸಾಧಕರಿಗೆ ನೀಡುವ ಪ್ರಶಸ್ತಿಯನ್ನು ಈ ಬಾರಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಕಲಾವಿದ ಶಂಕರನಾರಾಯಣ ಸಂಜೀವ ಬಳೆಗಾರರಿಗೆ ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿಯು 10 ಸಾವಿರ ರೂ. ಗೌರವಧನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಇದೇ ಜು.27ರಂದು ಉಡುಪಿಯ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಮೂಲತಃ ಬಡಗುತಿಟ್ಟಿನ ಕಲಾವಿದರಾದ ಸಂಜೀವ ಬಳೆಗಾರ ತಮ್ಮ ವೃತ್ತಿ ಜೀವನದ ಸುದೀರ್ಘ ಅವಧಿಯನ್ನು ತೆಂಕುತಿಟ್ಟಿನ ಕಟೀಲು ಮೇಳ ದಲ್ಲಿ ಕಳೆದವರು. ಮುಖ್ಯ ಸ್ತ್ರೀಪಾತ್ರಧಾರಿಯಾಗಿ, ಪೋಷಕ ಸ್ತ್ರೀಪಾತ್ರಧಾರಿಯಾಗಿ ಸುಮಾರು 40 ವರ್ಷ ಕಟೀಲು ಮೇಳದಲ್ಲಿಯೇ ವೃತ್ತಿಪರರಾಗಿದ್ದಾರೆ. ‘ದೇವಿಮಹಾತ್ಮೆ’ ಪ್ರಸಂಗದ ದೇವಿಯ ಪಾತ್ರವಲ್ಲದೆ ಹಲವು ಪೌರಾಣಿಕ ಪ್ರಸಂಗಗಳ ಗರತಿ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಕಟೀಲು ಕ್ಷೇತ್ರ ಮಹಾತ್ಮೆೆ ಪ್ರಸಂಗದ ‘ಯಶೋಮತಿ’ ಪಾತ್ರದಿಂದಾಗಿ ಅವರು ‘ಯಶೋಮತಿ ಸಂಜೀವಣ್ಣ’ ಎಂದೇ ಜನಪ್ರಿಯರಾಗಿದ್ದಾರೆ.
ನೇಪಥ್ಯ ಕಲಾವಿದರಿಗಾಗಿ ಮೀಸಲಾಗಿರುವ ‘ಸರ್ಪಂಗಳ ಪುರಸ್ಕಾರ’ವನ್ನು ವಿಷ್ಣು ಸಜಂಕಿಲ ಅವರಿಗೆ ಪ್ರದಾನ ಮಾಡಲಾಗುತ್ತದೆ. ಬಳಿಕ ‘ಭೀಮಭಾರತ’ ಯಕ್ಷಗಾನ ಬಯಲಾಟದ ಪ್ರದರ್ಶನವೂ ನಡೆಯಲಿದೆ.