×
Ad

ಗಾಂಜಾ ಸಾಗಾಟ ಪ್ರಕರಣ: ಇಬ್ಬರಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ; ದಂಡ

Update: 2019-07-24 19:38 IST

ಮಂಗಳೂರು, ಜು.24: ಗಾಂಜಾ ಅಕ್ರಮ ಸಾಗಾಟ ಪ್ರಕರಣದ ಇಬ್ಬರ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆರೋಪಿಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಾಜೂರು ನಿವಾಸಿ ಮುಹಮ್ಮದ್ ತೌಸಿಫ್ (22) ಹಾಗೂ ಮಲವಂತಿಗೆ ಗ್ರಾಮದ ಅಬ್ದುಲ್ ಸಿನಾನ್ (24) ಶಿಕ್ಷೆಗೊಳಗಾದವರು. ದಂಡ ಪಾವತಿಸಲು ವಿಫಲರಾದರೆ ಮತ್ತೆ ಆರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ಹಿನ್ನೆಲೆ

2018ರ ಮಾರ್ಚ್ 13ರಂದು ಮಧ್ಯಾಹ್ನ 3:20ರ ವೇಳೆಗೆ ಕಡೂರು-ಬಂಟ್ವಾಳ ರಸ್ತೆಯಲ್ಲಿ ಉಜಿರೆ ಅನುಗ್ರಹ ಪದವಿಪೂರ್ವ ಕಾಲೇಜು ಎದುರು ಬೆಳ್ತಂಗಡಿ ಠಾಣಾ ಪಿಎಸ್ಸೈ ಗಿರೀಶ್ ವಾಹನ ತಪಾಸಣೆ ಮಾಡುತ್ತಿದ್ದಾಗ ಚಾರ್ಮಾಡಿ ಕಡೆಯಿಂದ ಮಾರುತಿ ಕಾರು ಬಂದಿದ್ದು, ಪೊಲೀಸರನ್ನು ಗಮನಿಸಿ ಅಲ್ಲಿಂದಲೇ ಹಿಂದಿರುಗಿ ಪರಾರಿಯಾಗಲು ಯತ್ನಿಸುತ್ತಿದ್ದುದನ್ನು ಕಂಡು ಪೊಲೀಸರು ಸುತ್ತುವರಿದು ಕಾರು ತಪಾಸಣೆ ಮಾಡಿದ್ದರು. ಈ ವೇಳೆ ಕಾರಿನಲ್ಲಿ ಗಾಂಜಾ ಪತ್ತೆಯಾಗಿತ್ತು. ಗಾಂಜಾ, ಕಾರು, ಮೊಬೈಲ್ ಹಾಗೂ ನಗದನ್ನು ವಶಪಡಿಸಿಕೊಂಡು ಎನ್‌ಡಿಪಿಎಸ್ ಕಾಯ್ದೆಯಡಿ ಬೆಳ್ತಂಗಡಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎಲ್ಲ ಸೊತ್ತುಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ.

ನ್ಯಾಯಾಧೀಶ ಕಡ್ಲೂರು ಸತ್ಯ ನಾರಾಯಣಾಚಾರ್ಯ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪುಷ್ಪರಾಜ ಕೆ. ಹಾಗೂ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News