ಅಕ್ರಮ ಮರಳುಗಾರಿಕೆ ವಿರುದ್ಧ ಅರ್ಜಿಯ ಕುರಿತು ಕೇಂದ್ರ, ಸಿಬಿಐ, 5 ರಾಜ್ಯಗಳಿಗೆ ಸುಪ್ರೀಂ ನೋಟಿಸ್

Update: 2019-07-24 14:30 GMT

ಹೊಸದಿಲ್ಲಿ,ಜು.24: ಅಕ್ರಮ ಮರಳುಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಯಬೇಕು ಮತ್ತು ಅದರಲ್ಲಿ ಭಾಗಿಯಾಗಿರುವ ಘಟಕಗಳ ಗುತ್ತಿಗೆಯನ್ನು ಅಂತ್ಯಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ, ಸಿಬಿಐ ಮತ್ತು ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ನೋಟಿಸ್‌ಗಳನ್ನು ಹೊರಡಿಸಿದೆ.

ದೂರನ್ನು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ನ್ಯಾ.ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಆರಂಭದಲ್ಲಿ ಅರ್ಜಿದಾರ ಎಂ.ಅಳಗರಸಾಮಿ ಅವರಿಗೆ ಸೂಚಿಸಿತ್ತಾದರೂ ಬಳಿಕ ತಾನೇ ಈ ನೋಟಿಸ್‌ಗಳನ್ನು ಹೊರಡಿಸಿತು.

ದೇಶಾದ್ಯಂತ ಅಕ್ರಮ ಮರಳುಗಾರಿಕೆಯು ವಾತಾವರಣಕ್ಕೆ ಹಾನಿಯನ್ನುಂಟು ಮಾಡಿದೆ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿಯ ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅಕ್ರಮ ಮರಳುಗಾರಿಕೆಯಿಂದ ಪರಿಸರಕ್ಕೆ ಹಾನಿಯುಂಟಾಗಿದೆ ಮತ್ತು ಸಂಬಂಧಿತ ಅಧಿಕಾರಿಗಳು ಕಡ್ಡಾಯ ಪರಿಸರ ಯೋಜನೆ ಹಾಗೂ ಅನುಮತಿ ಇಲ್ಲದಿದ್ದರೂ ಮರಳುಗಾರಿಕೆಯನ್ನು ನಡೆಸಲು ಈ ಘಟಕಗಳಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಿದ ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ ಭೂಷಣ ಅವರು,ಅಕ್ರಮ ಮರಳುಗಾರಿಕೆಯು ದೇಶಾದ್ಯಂತ ಗಂಭೀರ ಪಿಡುಗು ಆಗಿದ್ದು,ಇದನ್ನು ಹತ್ತಿಕ್ಕುವ ಅಗತ್ಯವಿದೆ ಎಂದರು.

ದೇಶಾದ್ಯಂತ ನದಿಗಳು ಮತ್ತು ಬೀಚ್‌ಗಳಲ್ಲಿ ಅಕ್ರಮ ಮರಳುಗಾರಿಕೆಯನ್ನು ಮುಖ್ಯವಾಗಿ ಬಿಂಬಿಸಿರುವ ಅರ್ಜಿದಾರರು,ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವುದು ರಾಜ್ಯಗಳ ಹೊಣೆಗಾರಿಕೆಯಾಗಿದೆ,ಆದರೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ ಮತ್ತು ಇದು ಪರಿಸರ ಹಾನಿಗೆ ಕಾರಣವಾಗಿದೆ. ಇದರಿಂದಾಗಿ ಪ್ರಜೆಗಳ ಜೀವಿಸುವ ಹಕ್ಕಿಗೆ ಬೆದರಿಕೆಯೂ ಎದುರಾಗಿದೆ ಹಾಗೂ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯೂ ಹದಗೆಟ್ಟಿದೆ ಎಂದು ಹೇಳಿದ್ದಾರೆ.

 ಅಕ್ರಮ ಮರಳುಗಾರಿಕೆ ಕುರಿತು ವಿವಿಧ ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿರುವ ಅರ್ಜಿಯು,ಕೇಂದ್ರವು ಇಡೀ ಪ್ರದೇಶದ ಮೇಲೆ ಮರಳುಗಾರಿಕೆಯ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೆ ಮರಳುಗಾರಿಕೆಗೆ ಪರಿಸರ ಅನುಮತಿಯನ್ನು ನೀಡಬಾರದು ಎಂದು ಕೋರಿದೆ. ದೇಶಾದ್ಯಂತ ಅಕ್ರಮ ಮರಳುಗಾರಿಕೆ ಕುರಿತು ತನಿಖೆ ನಡೆಸಲು ಸಿಬಿಐಗೆ ಅಧಿಕಾರ ವ್ಯಾಪ್ತಿಯಿದೆ ಎಂದೂ ಅರ್ಜಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News