ಬೈರಂಪಳ್ಳಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೆರೆ

Update: 2019-07-24 14:32 GMT

ಹಿರಿಯಡ್ಕ, ಜು. 24: ಖಾಸಗಿ ಬಸ್ ನಿರ್ವಾಹಕ, ಬೈರಂಪಳ್ಳಿ ಗ್ರಾಮದ ದೂಪದಕಟ್ಟೆಯ ಹುಣ್ಸೆಬಾಕೇರ್ ನಿವಾಸಿ ಪ್ರಶಾಂತ್ ಪೂಜಾರಿ(37) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜು. 23ರಂದು ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆಕ್ರಾಸ್ ಬಳಿ ಬಂಧಿಸಿದ್ದಾರೆ.

ಬಂಧಿತನನ್ನು ಪೆರ್ಡೂರು ಆಲಂಗಾರು ನಿವಾಸಿ ಸಚಿನ್ ನಾಯ್ಕಾ (24) ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಜು. 27ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಕಳೆದ 14 ದಿನಗಳಿಂದ ತಲೆಮರೆಸಿಕೊಂಡಿದ್ದ ಸಚಿನ್ ನನ್ನು ಖಚಿತ ಮಾಹಿತಿ ಆಧಾರದಲ್ಲಿ ಹಿರಿಯಡ್ಕ ಠಾಣಾಧಿಕಾರಿ ಸತೀಶ್ ಬಲ್ಲಾಳ್, ಸಿಬ್ಬಂದಿಗಳಾದ ಸಂತೋಷ್ ಕೆ., ರಘು, ಹರೀಶ್ ಶಿಂದೆ, ಆನಂದ್ ಅವರನ್ನೊಳಗೊಂಡ ತಂಡ ಮೂರ್ಜೆ ಕ್ರಾಸ್ ಬಸ್ ನಿಲ್ದಾಣದ ಬಳಿ ಬಂಧಿಸು ವಲ್ಲಿ ಯಶಸ್ವಿಯಾಗಿದೆ.

ಈ ಪ್ರಕರಣದ ಇನ್ನೋರ್ವ ಆರೋಪಿ ಕುಕ್ಕೆಹಳ್ಳಿಯ ಬುಕ್ಕಿಗುಡ್ಡೆ ನಿವಾಸಿ ರಿಕ್ಷಾ ಚಾಲಕ ರಕ್ಷಕ್ ಪೂಜಾರಿ (19) ಎಂಬಾತನನ್ನು ಪೊಲೀಸರು ಜು.14 ರಂದು ಹೆಬ್ರಿ ಸಮೀಪ ಬಂಧಿಸಿದ್ದು, ಈತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ರಕ್ಷಕ್ ಮತ್ತು ಕೊಲೆಯಾದ ಪ್ರಶಾಂತ್ ಪೂಜಾರಿ ಸ್ನೇಹಿತರಾಗಿದ್ದು, ಈ ಹಿಂದೆ ಪ್ರಶಾಂತ್ ಪೂಜಾರಿ, ರಕ್ಷಕ್ ಮತ್ತು ಸಚಿನ್‌ಗೆ 50ಸಾವಿರ ರೂ. ಸಾಲ ವನ್ನು ಉಡುಪಿಯ ಸೊಸೈಟಿಯಿಂದ ತೆಗೆಸಿಕೊಂಡಿಸಿದ್ದರು. ಅದಕ್ಕಾಗಿ ಪ್ರಶಾಂತ್ ಪೂಜಾರಿ 5,000 ರೂ. ಕಮಿಷನ್ ಪಡೆದು ಕೊಂಡಿದ್ದರು. ಅಲ್ಲದೆ ಬ್ಯಾಂಕಿನಿಂದ ಪಡೆದ ಸಾಲದಲ್ಲಿ ಪ್ರಶಾಂತ್ ಪೂಜಾರಿ 20,000ರೂ. ಅನ್ನು ಸಾಲವಾಗಿ ಪಡೆದುಕೊಂಡಿದ್ದರು.

ಪ್ರಶಾಂತ್ ಪೂಜಾರಿ ತಾನು ಪಡೆದ 20 ಸಾವಿರ ರೂ.ವನ್ನು ವಾಪಾಸು ನೀಡದೆ ಸತಾಯಿಸುತ್ತಿದ್ದು, ಇದೇ ಧ್ವೇಷದಿಂದ ರಕ್ಷಕ್ ಮತ್ತು ಸಚಿನ್ ಸೇರಿ ಪ್ರಶಾಂತ್ ಪೂಜಾರಿಯನ್ನು ಜು.11ರಂದು ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News