ಗೌತಮ್ ನವ್ಲಾಖ ಮಾವೋವಾದಿ ಸಿಪಿಐ ಸದಸ್ಯ: ಪೊಲೀಸರ ಹೇಳಿಕೆ
ಮುಂಬೈ, ಜು.24: ಭೀಮಾ ಕೊರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖ ಮಾವೋವಾದಿ ಸಿಪಿಐ ಸಂಘಟನೆಯ ಸದಸ್ಯನಾಗಿದ್ದಾರೆ ಎಂದು ಪುಣೆ ಪೊಲೀಸರು ಬಾಂಬೆ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.
ತನ್ನ ವಿರುದ್ಧ ಸಲ್ಲಿಸಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿ ನವ್ಲಾಖ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರಾದ ರಂಜಿತ್ ಮೋರೆ ಮತ್ತು ಭಾರತಿ ಡಾಂಗ್ರೆ ಅವರಿದ್ದ ವಿಭಾಗೀಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ಸಂದರ್ಭ ಪುಣೆ ಪೊಲೀಸರ ಪರ ವಾದ ಮಂಡಿಸಿದ ಎಡಿಷನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಕಾಮತ್ ಪೈ, ನವಲಖ ಮಾವೋವಾದಿ ಸಿಪಿಐ ಸದಸ್ಯ ಎಂದು ಹೇಳಿದರು.
ನ್ಯಾಯಾಲಯ ಕಳೆದ ಬಾರಿ ನಡೆಸಿದ್ದ ಕಲಾಪದಲ್ಲಿ ವಾದ ಮಂಡಿಸಿದ್ದ ಅರುಣಾ ಪೈ, ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದಿದ್ದ ಐಇಡಿ ಸ್ಫೋಟವನ್ನು ನಕ್ಸಲರು ನಡೆಸಿದ್ದು ನವ್ಲಾಖ ಇಂತಹ ಸಂಘಟನೆಯ ಸದಸ್ಯನಾಗಿದ್ದಾರೆ ಎಂದು ಹೇಳಿದ್ದರು. ನವ್ಲಾಖಗೆ ಬಂಧನದಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದ ಕಾರಣ ಅವರನ್ನು ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದವರು ವಾದಿಸಿದ್ದರು.
ಹಿರಿಯ ಮಾವೋವಾದಿ ಮುಖಂಡರು ನವ್ಲಾಖಗೆ ಬರೆದಿದ್ದಾರೆ ಎನ್ನಲಾದ ಕೆಲವು ಪತ್ರಗಳನ್ನು ಇತ್ತೀಚೆಗೆ ನ್ಯಾಯಪೀಠಕ್ಕೆ ಸಲ್ಲಿಸಲಾಗಿತ್ತು. ಈ ಪತ್ರದ ಆಧಾರದಲ್ಲಿ ನವ್ಲಾಖರ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.