‘ವಾರ್ತಾ ಭಾರತಿ’ಯ ಸುದ್ದಿ ತಿರುಚಿ ಸುಳ್ಳು ಸಂದೇಶ: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ
ಮಂಗಳೂರು, ಜು.24: ಭಾರೀ ಮಳೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಜು.24ರಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎನ್ನುವ ಸುದ್ದಿಯನ್ನು varthabharati.in ಪ್ರಕಟಿಸಿತ್ತು. ಅದರ ಸ್ಕೀನ್ ಶಾಟ್ ಬಳಸಿ, ದಿನಾಂಕವನ್ನು 25 ಎಂದು ತಿರುಚಿ ಕಿಡಿಗೇಡಿಗಳು ಸುಳ್ಳು ಸಂದೇಶ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ‘ವಾರ್ತಾ ಭಾರತಿ’ ಮುಂದಾಗಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿಯಲ್ಲಿ ಜು.24ರಂದು ಮತ್ತು ದಕ್ಷಿಣ ಕನ್ನಡದಲ್ಲಿ ಜು.23ರಂದು ಜಿಲ್ಲಾಡಳಿತವು ರಜೆ ಘೋಷಿಸಿತ್ತು. ಈ ಬಗ್ಗೆ ಪ್ರಕಟವಾದ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಗಳಲ್ಲಿ ಸುಳ್ಳು ಸಂದೇಶಗಳನ್ನು ಹರಡಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು ಮತ್ತು ಯಾವುದೇ ಸುದ್ದಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಬೇಕು.
‘ವಾರ್ತಾ ಭಾರತಿ’ ವೆಬ್ ತಾಣದ ಸ್ಕ್ರೀನ್ ಶಾಟ್ ತೆಗೆದು ಎಡಿಟ್ ಮಾಡಿದ ಫೋಟೊವನ್ನು ಹಂಚಿದ, ಸುಳ್ಳು ಸಂದೇಶ ಹರಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.