ಟ್ರಂಪ್ ‘ಸಂಗತಿಗಳನ್ನು ಸೃಷ್ಟಿಸಿ ಹೇಳುವುದಿಲ್ಲ’: ಮುಖ್ಯ ಆರ್ಥಿಕ ಸಲಹೆಗಾರ

Update: 2019-07-24 15:18 GMT

ವಾಶಿಂಗ್ಟನ್, ಜು. 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಸಂಗತಿಗಳನ್ನು ಸೃಷ್ಟಿಸಿ ಹೇಳುವುದಿಲ್ಲ’ ಎಂದು ಅವರ ಮುಖ್ಯ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಮಂಗಳವಾರ ಹೇಳಿದ್ದಾರೆ.

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ತನಗೆ ಮನವಿ ಮಾಡಿದ್ದರು ಎಂಬ ಟ್ರಂಪ್‌ರ ಹೇಳಿಕೆ ಬಗ್ಗೆ ಶ್ವೇತಭವನದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರಂಪ್ ಹೇಳಿಕೆಯು ಭಾರತದಲ್ಲಿ ದೊಡ್ಡ ವಿವಾದವೊಂದನ್ನು ಸೃಷ್ಟಿಸಿರುವುದನ್ನು ಸ್ಮರಿಸಬಹುದಾಗಿದೆ. ಭಾರತ ಸರಕಾರವು ಈ ಹೇಳಿಕೆಯನ್ನು ಬಲವಾಗಿ ನಿರಾಕರಿಸಿದೆ.

ಅಧ್ಯಕ್ಷ ಟ್ರಂಪ್ ಈ ಹೇಳಿಕೆಯನ್ನು ಸೃಷ್ಟಿಸಿ ನೀಡಿದರೆ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ‘‘ಇದು ಅತ್ಯಂತ ಒರಟು ಪ್ರಶ್ನೆ’’ ಎಂದು ಕುಡ್ಲೋ ಪ್ರತಿಕ್ರಿಯಿಸಿದರು.

‘‘ಅಧ್ಯಕ್ಷರು ಏನನ್ನೂ ಸೃಷ್ಟಿಸಿ ಹೇಳುವುದಿಲ್ಲ. ನನ್ನ ಪ್ರಕಾರ, ಇದು ಅತ್ಯಂತ ಒರಟು ಪ್ರಶ್ನೆ. ನಾನು ಅದಕ್ಕೆ ಬದ್ಧನಲ್ಲ. ಅದು ನನ್ನ ವ್ಯಾಪ್ತಿಗಿಂತ ಹೊರಗಿದೆ. ಇದಕ್ಕೆ ಉತ್ತರಿಸುವುದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಸ್ವತಃ ಅಧ್ಯಕ್ಷರಿಗೆ ಬಿಟ್ಟಿದ್ದು. ಹಾಗಾಗಿ, ನಾನು ಆ ಪ್ರಶ್ನೆಗೆ ಏನೂ ಹೇಳುವುದಿಲ್ಲ. ಅಧ್ಯಕ್ಷರು ಏನನ್ನೂ ಸೃಷ್ಟಿಸಿ ಹೇಳುವುದಿಲ್ಲ’’ ಎಂದು ಅವರು ನುಡಿದರು.

ಸೋಮವಾರ ಶ್ವೇತಭವನದಲ್ಲಿ ತನ್ನನ್ನು ಭೇಟಿಯಾದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತನಾಡುತ್ತಾ, ಕಾಶ್ಮೀರ ವಿವಾದ ಇತ್ಯರ್ಥದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಟ್ರಂಪ್ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಜಪಾನ್‌ನ ಒಸಾಕದಲ್ಲಿ ಕಳೆದ ತಿಂಗಳು ನಡೆದ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾಗ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅವರು ನನ್ನಲ್ಲಿ ಮನವಿ ಮಾಡಿದ್ದರು ಎಂಬುದಾಗಿ ಇದೇ ಸಂದರ್ಭದಲ್ಲಿ ಟ್ರಂಪ್ ಹೇಳಿದ್ದಾರೆ.

ಆದರೆ, ಪ್ರಧಾನಿ ಮೋದಿ ಇಂಥ ಮನವಿಯನ್ನು ಯಾವತ್ತೂ ಮಾಡಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬಳಿಕ ಹೇಳಿದ್ದಾರೆ.

ಟ್ರಂಪ್‌ಗೆ ಮುಜುಗರ ಸೃಷ್ಟಿಸುವ ಸನ್ನಿವೇಶ: ನಿಕೊಲಸ್ ಬರ್ನ್ಸ್

ಆದರೆ, ಬುಶ್ ಆಡಳಿತದಲ್ಲಿ ರಾಜಕೀಯ ವ್ಯವಹಾರಗಳ ಅಧೀನ ವಿದೇಶ ಕಾರ್ಯದರ್ಶಿಯಾಗಿದ್ದ ನಿಕೊಲಸ್ ಬರ್ನ್ಸ್, ‘‘ಇದು ಅಧ್ಯಕ್ಷ ಟ್ರಂಪ್‌ಗೆ ಮುಜುಗರ ಸೃಷ್ಟಿಸುವ ಸನ್ನಿವೇಶ. ಕಾಶ್ಮೀರ ವಿವಾದ ಇತ್ಯರ್ಥ ಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಕೋರಿದ್ದರು ಎಂಬ ಅವರ ಹೇಳಿಕೆಯನ್ನು ಭಾರತ ಖಡಾಖಂಡಿತವಾಗಿ ನಿರಾಕರಿಸಿದೆ. ನೀವು ಸಂಗತಿಗಳನ್ನು ಸೃಷ್ಟಿಸಿ ಹೇಳಿದಾಗ ರಾಜತಾಂತ್ರಿಕತೆಯಲ್ಲಿ ಇದು ಸಂಭವಿಸುತ್ತದೆ’’ ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದಲ್ಲಿ ನಿಕೊಲಸ್ ಬರ್ನ್ಸ್ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News