×
Ad

ಗದ್ದೆಗಿಳಿದು ನೇಜಿ ನೆಟ್ಟು ಸಂಭ್ರಮಿಸಿದ ನಿಟ್ಟೂರು ಶಾಲೆ ವಿದ್ಯಾರ್ಥಿಗಳು

Update: 2019-07-24 20:55 IST

ಉಡುಪಿ, ಜು.24: ಕೃಷಿ ಪ್ರದಾನ ದೇಶವಾದ ಭಾರತದ ಕೃಷಿ ಬದುಕಿನ ಪರಿಚಯ ಹಾಗೂ ಕೃಷಿಕರು ಇದಕ್ಕಾಗಿ ಪಡುವ ಕಷ್ಟಗಳ ಅನುಭವವನ್ನು ವಿದ್ಯಾರ್ಥಿಗಳು ಸ್ವತಹ ಪಡೆಯುವ ಉದ್ದೇಶದಿಂದ ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿಯ 57 ವಿದ್ಯಾರ್ಥಿಗಳು ಇತ್ತೀಚೆಗೆ ಕಕ್ಕುಂಜೆಯ ಚಂದ್ರಶೇಖರ್ ನಾಕ್ ಅವರ ಗದ್ದೆಯಲ್ಲಿ ಕೆಲವು ಗಂಟೆಗಳನ್ನು ಕಳೆದು ಅವರ ಕೃಷಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

ಚಂದ್ರಶೇಖರ್ ನಾಕ್‌ರ 3 ಗದ್ದೆಗಳಲ್ಲಿ ಈ 57 ಮಂದಿ ವಿದ್ಯಾರ್ಥಿಗಳು ನೇಜಿ ನೆಟ್ಟು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಳೆದ 5 ವರ್ಷಗಳಿಂದ ಶಾಲಾ ಮುಖ್ಯ ಶಿಕ್ಷಕ ಮುರಲಿ ಕಡೆಕಾರ್ ಅವರ ಆಸಕ್ತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ನೇಜಿ ನೆಟ್ಟು, ಮುಂದೆ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡಿಸಿ, ಭತ್ತ ಸಂಗ್ರಹಿಸುವ ಕಾರ್ಯವನ್ನು ವಿದ್ಯಾರ್ಥಿ ಗಳಿಂದ ಮಾಡಿಸಲಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕರ ತಂಡವೂ ಉತ್ಸಾಹದಿಂದಲೇ ಭಾಗವಹಿಸುತ್ತಾ ಬಂದಿದೆ.

ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಗದ್ದೆಗಿಳಿದು ನಾಟಿ ಮಾಡುವ ಅನುಭವದೊಂದಿಗೆ ಕೃಷಿಕರ ಜೀವನಶೈಲಿಯನ್ನು ಖುದ್ದಾಗಿ ಅರಿತುಕೊಂಡರು. ಕೃಷಿ ಚಟುವಟಿಕೆಯ ಸುಖ-ಕಷ್ಟಗಳನ್ನು ಹತ್ತಿರದಿಂದ ತಿಳಿದುಕೊಂಡರು.

80 ವರ್ಷ ಪ್ರಾಯದ ಹಿರಿಯಜ್ಜಿ ಸತ್ಯಮ್ಮ ಹಾಗೂ ಶಶಿಕಲಾ, ಸುನಂದಾ, ಆಶಾ, ಪೂರ್ಣಿಮಾ ಇವರೆಲ್ಲರೂ ನೇಜಿ ನೆಡುವ ಸೂಕ್ಷ್ಮಗಳನ್ನು ವಿದ್ಯಾರ್ಥಿಗಳಿಗೆ ಬಹು ಪ್ರೀತಿಯಿಂದ ತಿಳಿಸಿಕೊಟ್ಟರು. ನೇಜಿ ನೆಟ್ಟ ಬಳಿಕ ವಿದ್ಯಾರ್ಥಿಗಳು ಕೆಸರು ಗದ್ದೆಯಾಟವನ್ನು ಮನಃಪೂರ್ತಿಯಾಗಿ ಆಡಿ, ಧೋ ಎಂದು ಸುರಿಯುತಿದ್ದ ಮಳೆಯಲ್ಲಿ ಮಿಂದು, ಕಡೆಗೆ ಸನಿಹದ ಸರೋವರದಲ್ಲಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಯ 4 ಗೋಡೆಯ ಹೊರಗೆ ಅತ್ಯಪೂರ್ವವಾದ ಜೀವನಾನುಭವವನ್ನು ಪಡೆದು ಸಂಭ್ರಮಿಸಿದರು.

ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕ ಮುರಲಿ ಕಡೆಕಾರ್ ಹಾಗೂ ಶಿಕ್ಷಕರಾದ ಅನಸೂಯ, ಶೃಂಗೇಶ್ವರ, ರಾಮದಾಸ್, ದೇವದಾಸ್ ಶೆಟ್ಟಿ, ಅಶೋಕ್, ಮಂಜುನಾಥ, ನಮಿತಾಶ್ರೀ, ಸೀಮಾ, ಪ್ರಸಾದ್ ಕೃಷಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಂತೆಯೇ ತೊಡಗಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News