ಬಂಟ್ವಾಳದಲ್ಲಿ ಮಳೆ: ವಿವಿಧೆಡೆ ಮನೆ, ತೋಟಗಳಿಗೆ ಹಾನಿ
ಬಂಟ್ವಾಳ, ಜು. 24: ತಾಲೂಕಿನ ಹಲವೆಡೆಗಳಲ್ಲಿ ಬುಧವಾರ ಬಿಸಿಲಿನ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿದೆ. ಮಂಗಳವಾರ ರಾತ್ರಿಯಿಂದೀಚೆಗೆ ಸುರಿದ ಮಳೆಗೆ ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿತ ಹಾಗೂ ಮನೆಗಳಿಗೆ ಹಾನಿ ಅವಘಡಗಳು ಸಂಭವಿಸಿದ್ದು, ಯಾವುದೇ ರೀತಿಯಾದ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಮಂಗಳವಾರ ರಾತ್ರಿ ಸುರಿದ ಮಳೆಗೆ ಕುಳ ಗ್ರಾಮದ ಕಾಂಜಗುಳಿ ಎಂಬಲ್ಲಿನ ವಿಶ್ವನಾಥ ಎಂಬವರ ಕಚ್ಛಾ ಮನೆಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ಹಂಚು ಮುರಿದು ಬಿದ್ದು ಭಾಶಃ ಹಾನಿಯಾಗಿ ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ.
ಪರ್ಲಿಯಾದ ಮದ್ದ ನಿವಾಸಿ ಆತಿಕ ಎಂಬವರ ಮನೆಗೆ ಗುಡ್ಡ ಜರಿದು ಹಾನಿಯಾಗಿದೆ. ಪೆರ್ನೆ ಗ್ರಾಮದ ಗಿರಿಯಪ್ಪ ಪೂಜಾರಿ ಎಂಬವರ ಮನೆ ಬದಿಯ ಬರೆ ಜರಿದು ನೀರಿನ ಪೈಪ್‍ಗೆ ಹಾನಿ, ಬಡಗಬೆಳ್ಳೂರು ಗ್ರಾಮದ ಸಣೂರು ಎಂಬಲ್ಲಿ ಅಪೋಲಿನ್ ಪಿಂಟೋ ಎಂಬವರ ಮನೆಗೆ ಹಾನಿ, ನೆಟ್ಲಮುಡ್ನೂರು ಗ್ರಾಮದ ಅಬೂಬಕರ್ ಎಂಬವರ ಮನೆಗೆ ಬರೆ ಕುಸಿದು ಹಾನಿ, ಚೇಳೂರು ಗ್ರಾಮದ ಶಾಂತಿ ಪಿಂಟೋ, ವಿಟ್ಲ ಮುಡ್ನೂರು ಗ್ರಾಮದ ಲೃಷ್ಣಪ್ಪ ಗೌಡ ಎಂಬವರ ಮನೆಗಳಿಗೆ ಹಾನಿಯಾಗಿವೆ.
ಮಂಚಿ ಗ್ರಾಮದ ಕಯ್ಯೂರು ನಿವಾಸಿ ಈಶ್ವರ ಮೂಲ್ಯ ಅವರ ಮನೆಯ ಶೌಚಾಲಯ ಕುಸಿದು ಬಿದ್ದಿದೆ. ಉಳಿ ಗ್ರಾಮದ ಮುದಲಾಡಿ ಲಿಂಗಪ್ಪ ಪೂಜಾರಿ ಅವರ ತೋಟದಲ್ಲಿ 4 ಅಡಿಕೆ ಹಾಗೂ 1 ತೆಂಗು ಮರವು ಬಿದ್ದು, ಪಕ್ಕದ ತೋಡಿಯಲ್ಲಿ ಕೊಚ್ಚಿ ಹೋಗಿ ಹಾನಿ ಸಂಭವಿಸಿರುವ ಬಗ್ಗೆ ಬಂಟ್ವಾಳ ತಾಲೂಕು ಕಚೇರಿಯ ವರದಿ ತಿಳಿಸಿದೆ.