ಭಟ್ಕಳ: ಗುಡ್ಡ ಕುಸಿಯುವ ಭೀತಿಯಲ್ಲಿ ಪುರವರ್ಗದ ಜನತೆ; ಅಧಿಕಾರಿಗಳಿಂದ ಪರಿಶೀಲನೆ
Update: 2019-07-24 21:19 IST
ಭಟ್ಕಳ: ತಾಲೂಕಿನ ಪುರವರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡ ಕುಸಿಯುವ ಭೀತಿಯನ್ನು ಎದುರಿಸುತ್ತಿರುವ ಅಲ್ಲಿನ ಜನತೆಗೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜೀದ್ ಆಹ್ಮದ್ ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಆತಂಕಿತ ಜನರಲ್ಲಿ ಧೈರ್ಯ ತುಂಬಿದಂತಾಗಿದೆ.
ಗುಡ್ಡದ ಮೇಲ್ಭಾಗದಲ್ಲಿ ಮಣ್ಣು ಅಗೆಯುತ್ತಿದ್ದು ಗುಡ್ಡದ ಮಣ್ಣು ಸಡಿಲಗೊಂಡು ಕುಸಿತದ ಆತಂಕ ಸೃಷ್ಟಿಸಿದೆ. ಗುಡ್ಡದ ತಪ್ಪಲಿನಲ್ಲಿ ಹಲವರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದು ಗುಡ್ಡ ಕುಸಿದು ಮನೆಗಳ ಮೇಲೆ ಬೀಳುವ ಸಾಧ್ಯತೆಯಿದೆ ಎಂಬುದು ಅಲ್ಲಿನ ಜನರನ್ನು ಚಿಂತೆಗೀಡು ಮಾಡಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳುವುದರ ಮೂಲಕ ತಮ್ಮನ್ನು ರಕ್ಷಿಸಬೇಕೆಂಬ ಮನವಿಯನ್ನು ಸಹಾಯಕ ಆಯುಕ್ತರ ಬಳಿ ಜನರು ಮಾಡಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.