ಜು. 27: ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗ ಮೇಳ
ಮಂಗಳೂರು, ಜು. 24: ಶ್ರೀನಿವಾಸ ವಿಶ್ವವಿದ್ಯಾನಿಲಯ ಹಾಗೂ ಶ್ರೀನಿವಾಸ ಸಮೂಹ ಸಂಸ್ಥೆಗಳು ಇವರ ವತಿಯಿಂದ ಜು.27 ರಂದು ಪೂರ್ವಾಹ್ನ 10ರಿಂದ ನಗರದ ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಶಿಬಿರದ ಸಂಚಾಲಕ ಡಾ. ಅಜಯ್ ಕುಮಾರ್ ಮತ್ತು ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಪಿಎಸ್. ಐತಾಳ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಸುಮಾರು 85ಕ್ಕೂ ಹೆಚ್ಚು ಪ್ರತಿಷ್ಥಿತ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮ ಸಂಸ್ಥೆಗಳಿಗೆ ಬೇಕಾದ ಸಿಬ್ಬಂದಿಗಳನ್ನು ಆಯ್ಕೆ ಮಾಡಲಿದ್ದಾರೆ. ಪಾರ್ಟ್ ಟೈಮ್ ಉದ್ಯೋಗ ಮಾಡುತ್ತಿರುವ ಉದ್ಯೋಗಗಳು, ಅಪ್ರೆಂಟಿಸ್ ಶಿಪ್ / ಪ್ರಾಜೆಕ್ಟ್ ತರಬೇತಿ ಪಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳು, ಫ್ರೀ ಲಾನ್ಸ್ ಕಾರ್ಯಕರ್ತರು ಹಾಗೂ ಇತರ ಅಭ್ಯರ್ಥಿ ಗಳು ಈ ಉದ್ಯೋಗ ಮೇಳದ ಸದುಪಯೋಗವನ್ನು ಪಡೆಯಬಹುದು.
ಎಸ್ಸೆಸೆಲ್ಸಿ / ಪಿಯುಸಿ / ಐಟಿಐ / ಡಿಪ್ರೋ/ ಪಾಲಿಟೆಕ್ನಿಕ್ / ಇತರ ಯಾವುದೇ ಪದವಿ / ಸ್ನಾತಕೋತ್ತರ ಪದವಿ ಪಡೆದ ಕಾಲೇಜು ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರು ಈ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕಲಿಕೆಯೊಂದಿಗೆ ಗಳಿಕೆ, ಉದ್ಯೋಗ ಪೂರ್ವ ಅನುಭವದ ದೃಷ್ಟಿಯಿಂದ ಹಾಗೂ ಕ್ಷೇತ ಕಾರ್ಯದ ಅನುಭವ ಪಡೆಯಲು ಇಚ್ಚಿಸುವವರಿಗೆ ಈ ಉದ್ಯೋಗ ಮೇಳ ಪ್ರಯೋಜನವಾಗಲಿದೆ ಎಂದು ಡಾ.ಪಿ.ಎಸ್.ಐತಾಳ್ ತಿಳಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳು ತಮ್ಮ ಸ್ವ - ಪರಿಚಯ ಪತ್ರ, ಐಡೆಂಟಿಟಿ ಕಾರ್ಡ್, ಭಾವ ಚಿತ್ರ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸ್ಥಳದಲ್ಲಿಯೇ ನೋಂದಣಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಶಿಬಿರದ ಸಂಚಾಲಕ ಡಾ. ಅಜಯ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್.ಬಿ.ಐ ಮಂಗಳೂರು ಶಾಖೆಯ ಮುಖ್ಯ ಪ್ರಬಂಧಕರಾದ ಪ್ರಶಾಂತ್ ಶೆಣೈ, ಶಿಬಿರದ ಸಂಘಟಕಾರದ ಪ್ರೊ.ಅಂಕಿತ್, ಅಣ್ಣಪ್ಪ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.