×
Ad

ಸಂಶೋಧನಾಶೀಲತೆ ಸೂಚ್ಯಂಕ ರ್ಯಾಂಕಿಂಗ್: ಭಾರತಕ್ಕೆ 52ನೇ ಸ್ಥಾನ

Update: 2019-07-24 22:14 IST

ಹೊಸದಿಲ್ಲಿ,ಜು.24: ಜಾಗತಿಕ ಸಂಶೋಧನಾಶೀಲತೆ ಸೂಚ್ಯಂಕ (ಜಿಐಐ)ದಲ್ಲಿ ಭಾರತವು 52ನೇ ಸ್ಥಾನವನ್ನು ಪಡೆದುಕೊಂಡಿದೆ. ಸಂಶೋಧನಾಶೀಲತೆ ಸೂಚ್ಯಂಕದಲ್ಲಿ 2018ರಲ್ಲಿ ಭಾರತವು 57ನೇ ಸ್ಥಾನದಲ್ಲಿತ್ತು.

ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಜಾಗತಿಕ ಬೌದ್ಧಿಕ ಆಸ್ತಿ ಸಂಸ್ಥೆಯ ಮಹಾನಿರ್ದೇಶಕ ಫ್ರಾನ್ಸಿಸ್ ಗ್ಯಾರಿ ಸಂಶೋಧನಾಶೀಲತೆ ಸೂಚ್ಯಂಕವನ್ನು ಬಿಡುಗಡೆಗೊಳಿಸಿದರು.

 ಕೇಂದ್ರ ವಾಣಿಜ್ಯ, ಕೈಗಾರಿಕೆ ಹಾಗೂ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಮಾತನಾಡಿ, 2019ರ ಜಾಗತಿಕ ಸಂಶೋಧನಾಶೀಲತೆ ಸೂಚ್ಯಂಕವು ಭಾರತದಲ್ಲಿ ಬಿಡುಗಡೆಯಾಗಿರುವುದು ಒಂದು ಮಹತ್ವದ ಘಟನೆಯಾಗಿದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ಸಂಶೋಧನಾಶೀಲತೆ ಬಗ್ಗೆ ಭಾರತ ಸರಕಾರ ಹೊಂದಿರುವ ಬದ್ಧತೆಗೆ ನೀಡಿದ ಮಾನ್ಯತೆ ಇದಾಗಿದೆ ಎಂದವರು ಹೇಳಿದರು.

ಜಿಐಐ ರ್ಯಾಂಕಿಂಗ್ ಕಾರ್ನೆಲ್ ವಿವಿ, ಇನ್‌ಸೀಡ್ ಹಾಗೂ ವಿಶ್ವಸಂಸ್ಥೆಯ ಬೌದ್ಧಿಕ ಆಸ್ತಿ ಸಂಸ್ಥೆ (ವಿಪೊ) ಹಾಗೂ ಜಿಐಐ ಪಾಲುದಾರ ಸಂಸ್ಥೆಗಳು ವಾರ್ಷಿಕವಾಗಿ ಪ್ರಕಟಿಸುತ್ತವೆ.

ಬೌದ್ಧಿಕ ಆಸ್ತಿಯ ಹಕ್ಕು ಸಲ್ಲಿಸುವಿಕೆಯ ಪ್ರಮಾಣದಿಂದ ಹಿಡಿದು ಮೊಬೈಲ್ ಆ್ಯಪ್ಲಿಕೇಶನ್ ಸೃಷ್ಟಿ,ಶಿಕ್ಷಣದ ಮೇಲಿನ ವೆಚ್ಚ, ವೈಜ್ಞಾನಿಕ ಹಾಗೂ ತಂತ್ರಜ್ಞಾನ ವಿಷಯಗಳ ಪ್ರಕಟಣೆಯವರೆಗೆ ಸುಮಾರು 80 ಮಾನದಂಡಗಳ ಆಧಾರದಲ್ಲಿ ಸಂಶೋಧನಾ ಶೀಲತಾ ಸೂಚ್ಯಂಕದ ರ್ಯಾಂಕಿಂಗನ್ನು ನಿರ್ಧರಿಸಲಾಗುತ್ತದೆ.

ಜಾಗತಿಕ ಸಂಶೋಧನಾಶೀಲತೆ ಸೂಚ್ಯಂಕದಲ್ಲಿ ಭಾರವು 25 ರ್ಯಾಂಕ್‌ನೊಳಗೆ ಬರುವ ತನಕ, ನಮ್ಮ ಸರಕಾರ ವಿಶ್ರಮಿಸುವುದಿಲ್ಲ ಹಾಗೂ ಸಂಶೋಧನೆಶೀಲತೆ ಸೂಚ್ಯಂಕದಲ್ಲಿ 10ನೇ ರ್ಯಾಂಕ್‌ನೊಳಗೆ ಬರುವುದು ನಮ್ಮ ಗುರಿಯಾಗಿದೆ’’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

 ಜಾಗತಿಕ ಸಂಶೋಧನಾಶೀಲತೆ ಸೂಚ್ಯಂಕದಲ್ಲಿ ಸ್ವಿಝಟ್ಜರ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಆನಂತರ ಸ್ವೀಡನ್, ಅಮೆರಿಕ, ನೆದರ್‌ಲ್ಯಾಂಡ್ಸ್, ಬ್ರಿಟನ್,ಫಿನ್‌ಲ್ಯಾಂಡ್,ಡೆನ್ಮಾರ್ಕ್, ಸಿಂಗಾಪುರ, ಜರ್ಮನಿ ಹಾಗೂ ಇಸ್ರೇಲ್ ಕ್ರಮವಾಗಿ ಟಾಪ್ 10 ಟ್ಟಿಯಲ್ಲಿರುವ ಇತರ ದೇಶಗಳಾಗಿವೆ. ಏಶ್ಯ ಖಂಡದಲ್ಲಿ ಸಂಶೋಧನಾಶೀಲತೆಯಲ್ಲಿ ಹಾಂಕಾಂಗ್ ಅತ್ಯುತ್ತಮ ನಿರ್ವಹಣೆ ತೋರಿದ್ದು 13ನೇ ರ್ಯಾಂಕ್ ಪಡೆದಿದೆ. ಚೀನಾ ಹಾಗೂ ಜಪಾನ್ ಕ್ರಮವಾಗಿ 14 ಹಾಗೂ 15ನೇ ಸ್ಥಾನದಲ್ಲಿವೆ.

 ಭಾರತವು ಮಧ್ಯ ಹಾಗೂ ದಕ್ಷಿಣ ಏಶ್ಯದಲ್ಲಿ ಸಂಶೋಧನಾಶೀಲತೆಯಲ್ಲಿ ಅತ್ಯತ್ತಮ ದೇಶವೆನಿಸಿದರೆ, ಇರಾನ್ 61 ಹಾಗೂ ಕಝಕಸ್ತಾನ್ 79ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News