ಬ್ರಿಟನ್ ಗೃಹ ಸಚಿವೆಯಾಗಿ ಪ್ರೀತಿ ಪಟೇಲ್, ಸಾಜಿದ್ ಜಾವಿದ್ ನೂತನ ವಿತ್ತ ಸಚಿವ
Update: 2019-07-25 00:08 IST
ಲಂಡನ್, ಜು.24: ನೂತನ ಬ್ರಿಟಿಷ್ ಪ್ರಧಾನಿ ಡೋರಿಸ್ ಜಾನ್ಸನ್ ಅವರು ತನ್ನ ಸಂಪುಟದ ಗೃಹ ಸಚಿವೆಯಾಗಿ (ಹೋಂ ಸೆಕ್ರೆಟರಿ) ಭಾರತೀಯ ಮೂಲದ ಪ್ರೀತಿ ಪಟೇಲ್ ಅವರನ್ನು ನೇಮಿಸಿದ್ದಾರೆ. ಈ ಮೂಲಕ ಬ್ರಿಟನ್ ಸರಕಾರದ ಅತ್ಯಂತ ಮಹತ್ವದ ಹುದ್ದೆಯನ್ನು ಭಾರತೀಯ ಮೂಲದ ಮಹಿಳೆಯೊಬ್ಬರು ವಹಿಸಿಕೊಳ್ಳಲಿದ್ದಾರೆ.
ವಿತ್ತ ಸಚಿವರಾಗಿ (ಚಾನ್ಸಲರ್ ಆಫ್ ಎಕ್ಸ್ ಚೆಕರ್) ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರನ್ನು ಪ್ರಧಾನಿ ಡೋರಿಸ್ ಜಾನ್ಸನ್ ನೇಮಿಸಿದ್ದಾರೆ. ಪ್ರಧಾನಿ ಬಳಿಕದ ಎರಡನೇ ಅತ್ಯಂತ ಮಹತ್ವದ ಹುದ್ದೆ ಇದು ಎಂದು ಪರಿಗಣಿಸಲಾಗುತ್ತದೆ.
ಈ ಮೊದಲು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಸಾಜಿದ್ ಜಾವಿದ್ ಅದರಲ್ಲಿ ಅಂತಿಮ ಹಂತಕ್ಕೆ ಬರಲು ವಿಫಲರಾಗಿದ್ದರು. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಅತ್ಯಂತ ಪ್ರಭಾವಿ ಹುದ್ದೆಗೆ ಅವರನ್ನು ಡೋರಿಸ್ ಜಾನ್ಸನ್ ನೇಮಿಸಿದ್ದಾರೆ.
ನೂತನ ವಿದೇಶಾಂಗ ಸಚಿವರಾಗಿ ಡೋಮಿನಿಕ್ ರಾಬ್ ಅವರನ್ನು ಆಯ್ಕೆ ಮಾಡಲಾಗಿದೆ.