ಭಾರತ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಈ ಮಾಂತ್ರಿಕ!
ಮುಂಬೈ, ಜು.25: ಕ್ರಿಕೆಟ್ ಮೈದಾನದಲ್ಲಿ ಫೀಲ್ಡಿಂಗ್ ಮಾಂತ್ರಿಕ ಎನಿಸಿಕೊಂಡ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಜಾಂಟಿ ರೋಡ್ಸ್ ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ರೋಡ್ಸ್ ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅತಿಗಣ್ಯ ಆಟಗಾರ ಎನಿಸಿಕೊಂಡಿದ್ದಾರೆ.
"ಹೌದು; ಭಾರತ ಕ್ರಿಕೆಟ್ ತಂಡದ ಹೊಸ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಹಾಗೂ ಪತ್ನಿ ಭಾರತವನ್ನು ಪ್ರೀತಿಸುತ್ತೇವೆ. ಈಗಾಗಲೇ ಆ ದೇಶ ನಮಗೆ ಸಾಕಷ್ಟು ಕೊಟ್ಟಿದೆ. ನಮ್ಮ ಇಬ್ಬರು ಮಕ್ಕಳೂ ಭಾರತದಲ್ಲಿ ಹುಟ್ಟಿದ್ದಾರೆ" ಎಂದು ಕ್ರಿಕೆಟ್‌ನೆಕ್ಸ್‌ಟ್ ವೆಬ್‌ಸೈಟ್ ಜತೆ ಮಾತನಾಡಿದ ರೋಡ್ಸ್ ಸ್ಪಷ್ಟಪಡಿಸಿದ್ದಾರೆ.
ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕ್ರಿಕೆಟ್ ಜಗತ್ತಿನ ದಂತಕಥೆ ಎನಿಸಿದ್ದ ರೋಡ್ಸ್ (49), ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಅವರನ್ನು 1992ರ ವಿಶ್ವಕಪ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದ ಅದ್ಭುತ ರನೌಟ್ ಕ್ರಿಕೆಟ್‌ಪ್ರಿಯರ ಮನದಲ್ಲಿ ಇಂದೂ ಅಚ್ಚಳಿಯದೇ ಉಳಿದಿದೆ.
ರೋಡ್ಸ್ ಈ ಮೊದಲು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಬಿಸಿಸಿಐ ಭಾರತ ತಂಡದ ಮುಖ್ಯ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನ. ಹಾಲಿ ಭಾರತದ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಆರ್.ಶ್ರೀಧರ್ ಅವರ ಗುತ್ತಿಗೆ ಅವಧಿಯನ್ನು 45 ದಿನಗಳ ಕಾಲ ವಿಸ್ತರಿಸಿ, ವೆಸ್ಟ್‌ಇಂಡೀಸ್ ಪ್ರವಾಸದ ಕೊನೆಯವರೆಗೂ ಮುಂದುವರಿಸಲಾಗಿದೆ