ಬ್ಯಾರಿ ಸಾಹಿತ್ಯ ಅಕಾಡಮಿಯ 2018ನೆ ಸಾಲಿನ ಗೌರವ ಪ್ರಶಸ್ತಿ ಪ್ರಕಟ

Update: 2019-07-25 11:39 GMT

ಮಂಗಳೂರು, ಜು.25: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2018ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ನಗರದ ಖಾಸಗಿ ಹೊಟೇಲಿನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಝುಲೇಖಾ ಮುಮ್ತಾಝ್, ಬ್ಯಾರಿ ಕಲಾ ಕ್ಷೇತ್ರದಲ್ಲಿ ಖಾಲಿದ್ ತಣ್ಣೀರುಬಾವಿ, ಬ್ಯಾರಿ ಜಾನಪದ ಕ್ಷೇತ್ರಗಳಲ್ಲಿ ನೂರ್ ಮುಹಮ್ಮದ್ ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣೆಕೆ ಮತ್ತು ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ.

ಮುಹಮ್ಮದ್ (ಜೀವರಕ್ಷಕ) ಮತ್ತು ಬಿ.ಎಂ. ಉಮ್ಮರ್ ಹಾಜಿ (ಸಮಾಜ ಸೇವೆ) ಅವರನ್ನು ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಬಶೀರ್ ಬೈಕಂಪಾಡಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಹುಸೈನ್ ಕಾಟಿಪಳ್ಳ, ಆರೀಫ್ ಕಲ್ಕಟ್ಟ, ಹಸನಬ್ಬ ಮೂಡುಬಿದಿರೆ ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರ ಪರಿಚಯ

ಝುಲೇಖ ಮುಮ್ತಾಝ್

ಕೆ. ಕಾಟುಬಾವ ಮತ್ತು ಆಯಿಶಾ ದಂಪತಿಯ ಮಗಳಾದ ಝುಲೇಖಾ ಹತ್ತನೇ ತರಗತಿಯವರೆಗೆ ಕಲಿತಿದ್ದಾರೆ. ಓದು, ಬರಹ ಆಸಕ್ತಿಯ ಕ್ಷೇತ್ರವಾಗಿದೆ. ಇವರ ಹಲವಾರು ಬರಹಗಳು ಬೇರೆ ಬೇರೆ ಸಂಚಿಕೆಗಳಲ್ಲಿ ಪ್ರಕಟವಾಗಿದೆ. ಬ್ಯಾರಿ ಸಾಹಿತ್ಯ ಸ್ಪರ್ಧೆ, ಬ್ಯಾರಿ ಓದುವ ಸ್ಪರ್ಧೆ, ಬ್ಯಾರಿ ಗಾದೆಯ ಸ್ಪರ್ಧೆ, ಬ್ಯಾರಿ ಚುಟುಕು ಸ್ಪರ್ಧೆ,ಬ್ಯಾರಿ ಅನುವಾದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ. ಇವರು ಬ್ಯಾರಿ ಅಕಾಡಮಿಯ ಗೌರವ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ಮಹಿಳಾ ಸಾಹಿತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಖಾಲಿದ್ ತಣ್ಣೀರುಬಾವಿ

ಕಳೆದ 42 ವರ್ಷಗಳಿಂದ ಬ್ಯಾರಿ ಮತ್ತು ತುಳು ಭಾಷೆಯಲ್ಲಿ ಸಂಗೀತ-ಗಾಯನದಲ್ಲಿ ತೊಡಗಿಸಿಕೊಂಡಿರುವ ಖಾಲಿದ್ ತಣ್ಣೀರುಬಾವಿ ಮಂಗಳೂರು ಆಕಾಶವಾಣಿಯಲ್ಲಿ 75ಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿದ್ದು, ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಬ್ಯಾರಿ, ತುಳು, ಕನ್ನಡ ಹಾಡುಗಳ ಪ್ರಸಾರಗೊಂಡಿವೆ. ಬ್ಯಾರಿ ಮತ್ತು ತುಳು ಭಾಷೆಯಲ್ಲಿ ಹಲವು ಗೀತೆಗಳು ಸಿಡಿ ಮೂಲಕ ಬಿಡುಗಡೆಗೊಂಡಿದೆ.

2016ರಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಮೂಡುಬಿದಿರೆ ಆಳ್ವಾಸ್ ನುಡಿಸಿರಿ ವತಿಯಿಂದ ಬ್ಯಾರಿ ಸಿರಿ ಸನ್ಮಾನ, 2014ರಲ್ಲಿ ವಸಂತ ಕದ್ರಿ ಮತ್ತು ಬಳಗದಿಂದ ಸನ್ಮಾನ, 2004ರಲ್ಲಿ ಕೇಂದ್ರ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಹಾಡುಗಾರ ಸನ್ಮಾನ, ಕರಾವಳಿ ಸಂಗೀತಗಾರರ ಒಕ್ಕೂಟದಿಂದ ಸನ್ಮಾನ, 2011ರಲ್ಲಿ ಕ್ಯಾಪ್‌ಮ್ಯಾನ್ ಮೀಡಿಯಾ ಮೇಕರ್ಸ್ ಮಂಗಳೂರು ಇವರಿಂದ ತುಳುನಾಡ ಬ್ಯಾರಿ ಮುತ್ತು ಸನ್ಮಾನ, ಲಯನ್ಸ್ ಡೈಮಂಡ್ ಇವರಿಂದ ಶ್ರೇಷ್ಠ ಗಾಯಕ ಪ್ರಶಸ್ತಿಗಳು ಲಭಿಸಿವೆ.

ನೂರ್ ಮುಹಮ್ಮದ್

ದಫ್ ಕಲಾರಂಗದಲ್ಲಿ ಪ್ರಸಿದ್ಧಿ ಪಡೆದಿರುವ ಇವರು ತನ್ನ 10ನೇ ವಯಸ್ಸಿನಲ್ಲಿಯೇ ದಫ್ ಕಲೆಯನ್ನು ಅಂದಿನ ಖ್ಯಾತ ದಫ್ ಉಸ್ತಾದ್ ಡಾ.ಎಂ.ಬಿ.ಮುಹಮ್ಮದ್‌ಮಂಜನಾಡಿ ಬಳಿ ಕಲಿತರು. 1990ರಲ್ಲಿ ಮುಲ್ಕಿ ಜಮಾಅತಿನ ಅಂಗರಗುಡ್ಡೆ ಎಂಬಲ್ಲಿ ಶಾಲೆಯ ಮಕ್ಕಳಿಗೆ ದಫ್ ಕಲಿಸುವ ಮೂಲಕ ಗಮನ ಸೆಳೆದರು. ಬಳಿಕ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾದ್ಯಂತ 200ಕ್ಕಿಂತಲೂ ಹೆಚ್ಚಿನ ಊರುಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿಗೆ ದಫ್ ಕಲೆಯನ್ನು ಕಲಿಸಿದರು. ಬ್ಯಾರಿ, ಕನ್ನಡ, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಹಾಡಿ ಜನಮನಗೆದ್ದರು. 2008ರಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ದಫ್ ವೀಡಿಯೋ ಆಲ್ಬಂ (ಸಿ.ಡಿ. ಕ್ಯಾಸೆಟ್) ಹೊರತಂದರು.

ಪುರಸ್ಕೃತರ ಪರಿಚಯ

ಮುಹಮ್ಮದ್: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಜಮೀನ್ದಾರ್ ದಿ. ಅಬ್ಬಾಸ್ ಓಟೆಚ್ಚಾರ್ ಅಯಿಶಾ ದಂಪತಿಯ 4 ಮಂದಿ ಗಂಡು ಮಕ್ಕಳಲ್ಲಿ 3ನೇಯವರಾದ ಮುಹಮ್ಮದ್ ಬಂದಾರು ದ.ಕ. ಜಿಲ್ಲೆಯ ಉಪ್ಪಿನಂಗಡಿ ಸಹಸ್ರಲಿಂಗೇಶ್ವ ದೇವಾಲಯದ ಬಳಿ ಜೀವರಕ್ಷಕರಾಗಿ ನಿಯುಕ್ತಿಗೊಂಡಿದ್ದಾರೆ.

ನೇತ್ರಾವತಿಯ ತುಂಬಿದ ನೆರೆ ನೀರಿನಲ್ಲಿ ಜೀವದ ಹಂಗು ತೊರೆದು ಪದ್ಮುಂಜ ಸಿ.ಎ.ಬ್ಯಾಂಕ್ ಮ್ಯಾನೇಜರ್ ತಿಮ್ಮಯ್ಯ ಗೌಡರನ್ನು ಪಾರು ಮಾಡಿದ್ದರು. ಶಾಂತಿ ಮೊಗರುನಲ್ಲಿ ನೀರಿಗೆ ಬಿದ್ದ 3 ಜನರ ಪೈಕಿ ಇಬ್ಬರ ಶವ ಮೇಲೆತ್ತಿರುವುದು, 2018ರ ಆಗಸ್ಟ್‌ನನಲ್ಲಿ ಇಚ್ಲಂಪಾಡಿಯಲ್ಲಿ ನೆರೆಯಿಂದಾಗಿ ಮನೆಯೊಳಗಿದ್ದ ಇಬ್ಬರು ಮಹಿಳೆಯರನ್ನು ಪಾರುಮಾಡಿದ್ದರು. ಈ ಹಿಂದೆ ಪಯಸ್ವಿನಿ ನದಿಯಲ್ಲಿ ಹಲವು ಯುವಕರ ಜೀವ ರಕ್ಷಣೆ ಮಾಡಿರುತ್ತಾರೆ.

ಬಿ.ಎಂ. ಉಮ್ಮರ್ ಹಾಜಿ: ಬಿ.ಮಹಮ್ಮದ್ ಹಾಜಿ ಮತ್ತು ಆಮಿನಾ ದಂಪತಿಯ ಮೂರನೇ ಪುತ್ರನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿಯಲ್ಲಿ ಜನಿಸಿದ ಬಿ.ಎಂ.ಉಮ್ಮರ್ ಹಾಜಿ ಡಿಪ್ಲಮೋ ಪದವೀಧರರು. ಉದ್ಯೋಗ ಅರಸಿಕೊಂಡು ಮಂಗಳೂರಿಗೆ ಬಂದು ಗ್ರಾನೈಟ್ ರಪ್ತುದಾರರೊಂದಿಗೆ ಸೇರಿಕೊಂಡರು. 2000ರಲ್ಲಿ ಸ್ವಂತ ಉದ್ಯಮಕ್ಕೆ ಕೈ ಹಾಕಿದರು. ಅದರೊಂದಿಗೆ ಹೆಣ್ಣು ಮಕ್ಕಳ ಮದುವೆ ಮತ್ತು ಶಿಕ್ಷಣ ವಂಚಿತರಾದವರ ನೆರವಿಗೆ ಸಹಾಯ ಹಸ್ತ ನೀಡಿ ಗಮನ ಸೆಳೆದರು. ಮಸೀದಿ, ದೇವಸ್ಥಾನ, ಚರ್ಚ್‌ಗಳಿಗೂ ನೆರವು ನೀಡಿದರು. ಕಳೆದ 12 ವರ್ಷದಿಂದ ಆರ್ಥಿಕವಾಗಿ ಹಿಂದುಳಿದ ಒಬ್ಬರನ್ನು ಉಮ್ರಾ ಯಾತ್ರೆಗೆ ಕಳುಹಿಸಿಕೊಡುತ್ತಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News