ಜು.28: ಮಂಗಳೂರಿನಲ್ಲಿ ಕೆವಿನ್ ಮಿಸ್ಕಿತ್‌ರಿಂದ 50ನೇ ಸಂಗೀತ ರಸಸಂಜೆ
ಮಂಗಳೂರು, ಜು.25: ಆಂಗಣ್ ಕೊಂಕ್ಣೆಚೆಂ ರಿಯಾದ್ (ಎಕೆಆರ್) ಸಂಸ್ಥೆ, ವಿ ಕೇರ್ ಎನ್ ಶೇರ್ ಚಾರಿಟೇಬಲ್ ಟ್ರಸ್ಟ್ ಮತ್ತು ಮೈಲ್‌ಸ್ಟೋನ್ ಸಹಯೋಗದಲ್ಲಿ ಜು.28ರಂದು ಸಂಜೆ 5:30ಕ್ಕೆ ಮಂಗಳೂರಿನ ಪುರಭವನದಲ್ಲಿ ಕೆವಿನ್ ಮಿಸ್ಕಿತ್‌ರಿಂದ 50ನೇ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಂಗಣ್ ಕೊಂಕ್ಣೆಚೆಂ ಅಧ್ಯಕ್ಷ ಅರುಣ್ ಪಲಿಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಸಂಗೀತ ರಸಸಂಜೆಯಿಂದ ಬಂದ ಆದಾಯವನ್ನು ಬಡ ಮಕ್ಕಳ ವಿದ್ಯಾರ್ಥಿ ವೇತನ ಮತ್ತು ಬಡರೋಗಿಗಳ ವೈದ್ಯಕೀಯ ಖರ್ಚುಗಳಿಗಾಗಿ ವಿ ಕೇರ್ ಎನ್ ಶೇರ್ ಟ್ರಸ್ಟ್ ಸಂಸ್ಥೆಗೆ ನೀಡಲಾಗುವುದು. ಖ್ಯಾತ ಕೊಂಕಣಿ ಕವಿ ವಿಲ್ಸನ್ ಕಟೀಲ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಆಂಗಣ್ ಕೊಂಕ್ಣೆಚೆಂ ರಿಯಾದ್: ಆಂಗಣ್ ಕೊಂಕ್ಣೆಚೆಂ ರಿಯಾದ್ (ಎಕೆಆರ್) ಸಂಘಟನೆಯು ರಿಯಾದ್, ದಮ್ಮಾಮ್ ಮತ್ತು ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕೊಂಕಣಿ ಸಂಸ್ಕೃತಿ ಮತ್ತು ಭಾಷೆಯನ್ನು ಉತ್ತೇಜಿಸುವಲ್ಲಿ ತೊಡಗಿರುವ ಲಾಭರಹಿತ ಸಂಸ್ಥೆಯಾಗಿದೆ. 2007ರಲ್ಲಿ ಪ್ರಾರಂಭವಾದಾಗಿನಿಂದ ಯುವಜನರ ಪ್ರತಿಭೆಯನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಗಲ್ಫ್ ವಾಯ್ಸ್ ಆಫ್ ಮಂಗಳೂರು, ಬಾಯ್ಲ್ ನೃತ್ಯ ಸ್ಪರ್ಧೆ ಅಲ್ಲದೆ, ಮಂಗಳೂರಿನಲ್ಲಿ ಕೆಲವು ದತ್ತಿ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದೆ.
ವಿ ಕೇರ್ ಎನ್ ಶೇರ್: ಅಸಹಾಯಕರಿಗೆ ಸಹಾಯ ನೀಡುವ ಉದ್ದೇಶದಿಂದ ಮಾರ್ಚ್ 2008ರಲ್ಲಿ ದುಬೈಯಲ್ಲಿ ಸಂಸ್ಥೆ ಆರಂಭಗೊಂಡಿತು. ಹಲವು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಯುಎಇಯಲ್ಲಿ ಉದ್ಯೋಗ ದೊರಕಿಸಿಕೊಡುವಲ್ಲಿ ಸಂಸ್ಥೆ ಶ್ರಮಿಸಿದೆ. ಅಗಸ್ಟ್ 2015ರಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ವಿ ಕೇರ್ ಎನ್ ಶೇರ್ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿಯಾಗಿ ಅರುಣ್ ಪಲಿಮಾರ್ ತೊಡಗಿಸಿಕೊಂಡಿದ್ದಾರೆ.
ಕೆವಿನ್ ಮಿಸ್ಕಿತ್: ಕೆವಿನ್ ಮಿಸ್ಕಿತ್‌ರನ್ನು ನವಯುಗದ ಕೊಂಕಣಿ ಸಂಗೀತಕಾರ ಎಂದು ಕರೆಯಲಾಗುತ್ತದೆ. ಕಡಿಮೆ ಅವಧಿಯಲ್ಲಿ 50 ಸಂಗೀತ ಪ್ರದರ್ಶನಗಳನ್ನು ನೀಡಿದ ಅತ್ಯಂತ ಕಿರಿಯ ಸಂಗೀತಗಾರರಾಗಿರುವ ಇವರ ಕೊಂಕಣಿ ಸಂಯೋಜನೆಗಳಾದ ಕೆನ್ನಾ ಕೆನ್ನಾ, ಅಬೊಲೆಂ, ಥೆಂಬೆ ಥೆಂಬೆ, ಏಕ್ ಗ್ಲಾಸ್ ಬಿಯರ್ ಮುಂತಾದ ಕೊಂಕಣಿ ಹಾಡುಗಳು ಸೂಪರ್‌ಹಿಟ್ ಹಾಡುಗಳಾಗಿವೆ. ಇವರು ಕೆನಡಾ, ಯುನೈಟಡ್ ಕಿಂಗ್‌ಡಮ್, ಐರ್‌ಲ್ಯಾಂಡ್, ಯುಎಇ, ಕುವೈತ್, ಒಮನ್, ಬಹ್ರೈನ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲೂ ಸಂಗೀತ ಪ್ರದರ್ಶನಗಳನ್ನು ನೀಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಸಂಗೀತ ಸಂಯೋಜಕ ಮತ್ತು ಸಂಗೀತಗಾರರಾಗಿರುವ ಕೆವಿನ್ ಮಿಸ್ಕಿತ್ , ವಿ ಕೇರ್ ಎನ್ ಶೇರ್ ಟ್ರಸ್ಟ್‌ನ ಟ್ರಸ್ಟಿ ನವೀನ್ ಮೆಲ್ವಿನ್ ಡಿಸೋಜ ಹಾಗೂ ಪ್ರಚಾರ ಸಮಿತಿಯ ಮುಖ್ಯಸ್ಥ ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು.