ಜು.28ರಿಂದ ಚಂದನವಾಹಿನಿಯಲ್ಲಿ ಸಂತ ಅಂತೋನಿಯವರ ಜೀವನ ಚರಿತ್ರೆ ಧಾರಾವಾಹಿ ಪ್ರಸಾರ
ಮಂಗಳೂರು, ಜು.25: ಸಂತ ಅಂತೋನಿಯವರ ಜೀವನ ಚರಿತ್ರೆ ಧಾರಾವಾಹಿ ಜು.28ರಿಂದ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಶ್ರೇಷ್ಠ ಧರ್ಮಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ನರೊನ್ಹಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಬಿಷಪ್ ಹೌಸ್ ನಲ್ಲಿಂದು ಧಾರಾವಾಹಿಯ ಮುನ್ನುಡಿ ಹಾಡನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ನಮ್ಮ ಸಮಾಜದಲ್ಲಿ ನಶಿಸಿ ಹೋಗುತ್ತಿರುವ ಮೌಲ್ಯಗಳ ಬಗ್ಗೆ ಮತ್ತೆ ಸಮಾಜಕ್ಕೆ ನೆನಪಿಸುವ ದೃಷ್ಟಿಯಿಂದ ಮತ್ತು ಸಂತ ಅಂತೋನಿಯವರ ಪವಾಡಗಳು ಅವರ ಸಂದೇಶಗಳ ಹಿನ್ನೆಲೆಯಲ್ಲಿ ಈ ಧಾರಾವಾಹಿ ಮಹತ್ವ ಪಡೆದಿದೆ ಎಂದು ಅವರು ವಿವರಿಸಿದರು.
ಕೆಥೊಲಿಕ್ ಧರ್ಮಸಭೆಯಲ್ಲಿ ಮಾತೆ ಮರಿಯಮ್ಮನವರ ನಂತರ ಅತೀ ಹೆಚ್ಚು ದೇವಾಲಯಗಳನ್ನು ಮತ್ತು ಪುಣ್ಯ ಕ್ಷೇತ್ರಗಳನ್ನು ಸಂತ ಅಂತೋನಿಯವರಿಗೆ ಸಮರ್ಪಿಸಲಾಗಿದೆ. ಈ ಧಾರಾವಾಹಿ ಜು.28ರಿಂದ ಪ್ರತೀ ರವಿವಾರ ಅಪರಾಹ್ನ 2ರಿಂದ 2:30ರವರೆಗೆ ದೂರದರ್ಶನ ಚಂದನದಲ್ಲಿ ಪ್ರಸಾರವಾಗಲಿದೆ ಎಂದು ಸಂತ ಅಂತೋನಿಯವರ ಆಶ್ರಮದ ನಿರ್ದೇಶಕ ವಂ.ಒನಿಲ್ ಡಿಸೋಜ ತಿಳಿಸಿದ್ದಾರೆ.