ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಕಂಪ್ಯೂಟರ್ ಬಾಬಾ

Update: 2019-07-25 16:19 GMT

ಭೋಪಾಲ,ಜು.25: ಕರ್ನಾಟಕದಲ್ಲಿ ಬಿಜೆಪಿ ಆಡಳಿತಾರೂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಸಫಲವಾಗಿರುವ ಮಧ್ಯೆಯೇ ಮಧ್ಯ ಪ್ರದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಸೇರಿದ್ದಾರೆ.

ಈ ಕುರಿತು ಮಾತನಾಡಿರುವ ಕಂಪ್ಯೂಟರ್ ಬಾಬಾ, ಬಿಜೆಪಿಯ ಇನ್ನೂ ನಾಲ್ವರು ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ. ಸಮಯ ಬಂದಾಗ ಅವರನ್ನು ಎಲ್ಲರ ಎದುರು ನಿಲ್ಲಿಸುತ್ತೇನೆ. ಮುಖ್ಯಮಂತ್ರಿ ಕಮಲ್‌ನಾಥ್ ಅವರು ತಿಳಿಸಿದಾಗ ನಾನು ಹಾಗೆ ಮಾಡುತ್ತೇನೆ. ಅವರೆಲ್ಲ ನನ್ನ ಸಂಪರ್ಕದಲ್ಲಿದ್ದು ಸರಕಾರ ಸೇರಲು ಕಾತರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶರದ್ ಕೊಲ್ ಮತ್ತು ನಾರಾಯಣ್ ತ್ರಿಪಾಠಿ ಬುಧವಾರ ಕಮಲ್‌ನಾಥ್ ಸರಕಾರ ಮಂಡಿಸಿದ ನ್ಯಾಯವಾದಿಗಳ ರಕ್ಷಣೆ ಕಾಯ್ದೆ ಮಸೂದೆಯ ಪರ ಮತ ಚಲಾಯಿಸಿದ್ದರು. ಈ ಕಾಯ್ದೆ ಮಧ್ಯ ಪ್ರದೇಶದ ವಕೀಲರ ಬಹಳ ಹಿಂದಿನ ಬೇಡಿಕೆಯಾಗಿದೆ. ಇದರ ಕರಡು ಮಸೂದೆಯನ್ನು 15 ವರ್ಷಗಳ ಹಿಂದೆಯೇ ಸಿದ್ಧಪಡಿಸಲಾಗಿದ್ದರೂ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ಹದಿನೈದು ವರ್ಷಗಳ ಅವಧಿಯಲ್ಲಿ ಅದನ್ನು ಮಂಡಿಸಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಈ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಚುನಾವಣಾಪೂರ್ವ ಭರವಸೆ ನೀಡಿತ್ತು.

ಕಂಪ್ಯೂಟರ್ ಬಾಬಾ ಎಂದೇ ಕರೆಯಲ್ಪಡುವ ನಾಮ್‌ದೇವ್ ದಾಸ್ ತ್ಯಾಗಿ ಮಧ್ಯ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಹಾಯಕ ಸಚಿವ ಸ್ಥಾನವನ್ನು ಹೊಂದಿದ್ದರು. ಆದರೆ ರಾಜ್ಯದಲ್ಲಿ ಸರಕಾರ ಬದಲಾಗುತ್ತಿದ್ದಂತೆ ತನ್ನ ನಿಷ್ಠೆಯನ್ನೂ ಬದಲಿಸಿದ ಬಾಬಾ ಕಾಂಗ್ರೆಸ್ ಸರಕಾರದಲ್ಲಿ 17 ಸದಸ್ಯರ ನರ್ಮದಾ ನದಿ ಟ್ರಸ್ಟ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News