ಗುಂಪು ಹತ್ಯೆ, ಮರ್ಯಾದೆ ಹತ್ಯೆ ವಿರುದ್ಧ ಕಾನೂನು: ಲೋಕಸಭೆಯಲ್ಲಿ ಡಿಎಂಕೆ ಆಗ್ರಹ
Update: 2019-07-25 22:16 IST
ಹೊಸದಿಲ್ಲಿ, ಜು. 25: ಗುಂಪಿನಿಂದ ಥಳಿಸಿ ಹತ್ಯೆ ಹಾಗೂ ಮರ್ಯಾದೆ ಹತ್ಯೆ ನಿಲ್ಲಿಸಲು ಕಾನೂನು ಜಾರಿಗೆ ತರುವುದು ಇಂದಿನ ಅಗತ್ಯ. ತ್ರಿವಳಿ ತಲಾಕ್ ಅನ್ನು ಅಪರಾಧೀಕರಣಗೊಳಿಸುವುದು ಅಲ್ಲ ಎಂದು ಡಿಎಂಕೆ ಗುರುವಾರ ಲೋಕಸಭೆಯಲ್ಲಿ ಹೇಳಿದೆ.
ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕಿನ ಭದ್ರತೆ) ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡ ಡಿಎಂಕೆ ನಾಯಕಿ ಕನಿಮೋಳ್, ತಾನು ಈ ಮಸೂದೆ ವಿರೋಧಿಸುವುದಾಗಿ ತಿಳಿಸಿದರು. ಮರ್ಯಾದೆ ಹತ್ಯೆ ನಿಲ್ಲಿಸಲು ಸರಕಾರ ಮಸೂದೆ ತರಬೇಕು. ಮರ್ಯಾದೆ ಹತ್ಯೆ ಬಗ್ಗೆ ಪ್ರತಿ ದಿನ ವರದಿಯಾಗುತ್ತಿದೆ. ಅದನ್ನು ತಡೆಯಲು ನಾವು ಯಾವ ಕಾನೂನು ಜಾರಿಗೆ ತರುತ್ತಿದ್ದೇವೆ ? ಎಂದು ಅವರು ಪ್ರಶ್ನಿಸಿದರು. ಗುಂಪಿನಿಂದ ಥಳಿಸಿ ಹತ್ಯೆ ವಿರುದ್ಧ ನಾವು ಮಸೂದೆ ತರಬೇಕು. ಇದು ಇಂದಿನ ಅಗತ್ಯ. ಅಲ್ಲದೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಬೇಕು ಎಂದು ಅವರು ಹೇಳಿದರು.