ಬುಡ್ನಾರು: ದೇವಸ್ಥಾನದಲ್ಲಿ ಕಳ್ಳತನ
ಉಡುಪಿ, ಜು.25: ಶಿವಳ್ಳಿ ಗ್ರಾಮದ ಬುಡ್ನಾರು ಐದನೇ ಕ್ರಾಸ್‌ನಲ್ಲಿರುವ ರಾಘವ ಶೆಟ್ಟಿಗಾರ್ ಎಂಬವರ ಪರಿವಾರದ ಮಹಾಕಾಳಿ ದೇವಸ್ಥಾನಕ್ಕೆ ನಿನ್ನೆ ರಾತ್ರಿ 8ರಿಂದ ಇಂದು ಮುಂಜಾನೆ ಆರು ಗಂಟೆಯ ನಡುವಿನ ಅವಧಿಯಲ್ಲಿ ನುಗ್ಗಿದ ಕಳ್ಳರು ಸುಮಾರು 90,000ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.
ದೇವಸ್ಥಾನದ ಮುಂಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿದ ಕಳ್ಳರು 36ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ರಾಘವ ಶೆಟ್ಟಿಗಾರ್ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ: ಬುಡ್ನಾರಿನಲ್ಲಿರುವ ಶ್ರೀಬಬ್ಬುಸ್ವಾಮಿ ಮತ್ತು ಸಪರಿವಾರ ದೈವಸ್ಥಾನದಲ್ಲಿ ಜು.16ರಿಂದ 25ರ ಬೆಳಗ್ಗೆ 6ಗಂಟೆ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ.
ಕಳ್ಳರು ದೇವಸ್ಥಾನದ ಮುಂಬಾಗಿಲಿನ ಬೀಗ ಮುರಿದು ದೇವಿಯ ಸೊಂಟದ ಪಟ್ಟಿಯ ಸುಮಾರು 50ಗ್ರಾಂ ತೂಕದ ಬೆಳ್ಳಿಯ ನಾಗನಹೆಡೆ, 150ಗ್ರಾಂ ತೂಕದ ಬೆಳ್ಳಿ ಫಣಿಪತ್ರ, 30ಗ್ರಾಂ ತೂಕದ ಸರ ಸೇರಿ ಒಟ್ಟು 230 ಗ್ರಾಂ ತೂಕದ ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಡಬ್ಬದಲ್ಲಿದ್ದ ಸುಮಾರು 11,500ರೂ. ಹಣವನ್ನು ಕಳವು ಮಾಡಿರುವುದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.