ಉ. ಕೊರಿಯದಿಂದ ಕ್ಷಿಪಣಿ ಉಡಾವಣೆ: ಅಮೆರಿಕ
ವಾಶಿಂಗ್ಟನ್, ಜು. 25: ಉತ್ತರ ಕೊರಿಯವು ಕಿರು ವ್ಯಾಪ್ತಿಯ ಕ್ಷಿಪಣಿಯೊಂದನ್ನು ಉಡಾಯಿಸಿದೆ ಎಂದು ಅಮೆರಿಕ ಬುಧವರ ಹೇಳಿದೆ. ಅದೇ ವೇಳೆ, ಎರಡು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂಬುದಾಗಿ ದಕ್ಷಿಣ ಕೊರಿಯದ ಮಾಧ್ಯಮಗಳು ವರದಿ ಮಾಡಿವೆ.
ಮುಂದಿನ ತಿಂಗಳು ನಡೆಯಲಿರುವ ಅಮೆರಿಕ-ದಕ್ಷಿಣ ಕೊರಿಯ ಸೇನಾಭ್ಯಾಸಕ್ಕೆ ಮುನ್ನ ಕ್ಷಿಪಣಿ ಉಡಾವಣೆ ನಡೆದಿದೆ. ಈ ಸೇನಾಭ್ಯಾಸವು ಅಮೆರಿಕ ಮತ್ತು ಉತ್ತರ ಕೊರಿಯಗಳ ನಡುವಿನ ಪರಮಾಣು ಮಾತುಕತೆ ಪುನರಾರಂಭದ ಮೇಲೆ ಪರಿಣಾಮ ಬೀರಬಹುದು ಎಂಬುದಾಗಿ ಉತ್ತರ ಕೊರಿಯ ಈಗಾಗಲೇ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಅದು ಕಿರು ವ್ಯಾಪ್ತಿಯ ಕ್ಷಿಪಣಿಯಾಗಿತ್ತು ಎಂಬುದನ್ನು ನಾನು ಖಚಿತಪಡಿಸಬಲ್ಲೆ’’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಅದೇ ವೇಳೆ, ಉತ್ತರ ಕೊರಿಯವು ಬೆಳಗ್ಗೆ 5:34ಕ್ಕೆ ಒಂದು ಕ್ಷಿಪಣಿ ಮತ್ತು ಬೆಳಗ್ಗೆ 5:57ಕ್ಕೆ ಇನ್ನೊಂದು ಕ್ಷಿಪಣಿಯನ್ನು ವೊನ್ಸನ್‌ನಿಂದ ಪೂರ್ವ ಸಮುದ್ರಕ್ಕೆ ಹಾರಿಸಿದೆ ಹಾಗೂ ಆ ಕ್ಷಿಪಣಿಗಳು ಸುಮಾರು 430 ಕಿ.ಮೀ. ಹಾರಿವೆ ಎಂದು ದಕ್ಷಿಣ ಕೊರಿಯದ ಸೇನಾ ಮುಖ್ಯಸ್ಥರನ್ನು ಉಲ್ಲೇಖಿಸಿ ಆ ದೇಶದ ಸುದ್ದಿ ಸಂಸ್ಥೆ ಯೊನ್‌ಹಾಪ್ ವರದಿ ಮಾಡಿದೆ.