ಮಂಗಳೂರು: ಯುವಕನಿಗೆ ಚೂರಿ ಇರಿದು ಕೊಲೆಯತ್ನ; ಆರೋಪಿ ಪರಾರಿ
ಮಂಗಳೂರು, ಜು. 26: ನಗರದ ಮಾಲೆಮಾರ್ ನೆಕ್ಕಿಲಗುಡ್ಡೆ ಎಂಬಲ್ಲಿ ಯುವಕನೊಬ್ಬನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ 9:30ರ ವೇಳೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಕೋಡಿಕಲ್ ನಿವಾಸಿ ಧೀರಜ್ (25) ಚೂರಿಯಿಂದ ಹಲ್ಲೆಗೈದ ಆರೋಪಿ. ಮಂಗಳಾದೇವಿ ರತನ್ ರಾಜ್ (28)ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ: ಮಂಗಳಾದೇವಿ ನಿವಾಸಿಗಳಾದ ರತನ್‌ರಾಜ್ ಮತ್ತು ಪುನೀತ್ ಗೆಳೆಯರು. ರತನ್‌ರಾಜ್‌ಗೆ ಧೀರಜ್ ಎಂಬಾತನ ಮೇಲೆ ಹಳೆ ವೈಷಮ್ಯವಿದ್ದು, ಈ ಬಗ್ಗೆ ಗೆಳೆಯ ಪುನೀತ್‌ನಲ್ಲಿ ರತನ್ ಹೇಳಿದ್ದ. ಇದಕ್ಕೆ ಪುನೀತ್ ‘ನಿಮ್ಮಿಬ್ಬರನ್ನು ನಾವು ರಾಜಿ ಸಂಧಾನ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದ.
ಅದರಂತೆ, ಗುರುವಾರ ರಾತ್ರಿ ರತನ್‌ರಾಜ್ ಮತ್ತು ಧೀರಜ್‌ನನ್ನು ಪುನೀತ್ ಬರಲು ಹೇಳಿ ಮಾಲೆಮಾರ್ ನೆಕ್ಕಿಲಗುಡ್ಡೆ ಬಳಿ ಭೇಟಿಯಾಗಿದ್ದರು. ಈ ಸಂದರ್ಭ ರತನ್‌ರಾಜ್ ಮತ್ತು ಧೀರಜ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದು ವಿಪರೀತಕ್ಕೆ ಹೋಗುತ್ತಿದ್ದಂತೆ ಧೀರಜ್ ತಾನು ಬೈಕ್‌ನಲ್ಲಿ ಅಡಗಿಸಿಟ್ಟ ಚೂರಿಯಿಂದ ರತನ್‌ರಾಜ್‌ಗೆ ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಿ ಸಂಧಾನಕ್ಕೆ ಕರೆದಿದ್ದ ಪುನೀತ್‌ಗೆ ಈ ಘಟನೆ ಶಾಕ್ ನೀಡಿದ್ದು, ಧೀರಜ್ ಚೂರಿ ತಂದಿರುವುದು ಗೊತ್ತಿರಲಿಲ್ಲ ಎಂದು ತಿಳಿದುಬಂದಿದೆ. ಗಾಯಾಳು ರತನ್ ರಾಜ್‌ನನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಾವೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.