ಚಂದ್ರನಲ್ಲಿಗೆ ಹೋಗಲು ಟಿಕೆಟ್ ಕಾಯ್ದಿರಿಸಿ: ಅಡೂರು ಗೋಪಾಲಕೃಷ್ಣನ್

Update: 2019-07-26 17:17 GMT

ತಿರುವನಂತಪುರ, ಜು. 26: ‘ಜೈ ಶ್ರೀರಾಮ್’ ಪಠಣ ಆಲಿಸಲು ಬಯಸದೇ ಇದ್ದರೇ ಚಂದ್ರನಲ್ಲಿಗೆ ಹೋಗಿ ಎಂದು ಬಿಜೆಪಿ ವಕ್ತಾರ ಬಿ. ಗೋಪಾಲಕೃಷ್ಣನ್ ಅವರ ಸಲಹೆಗೆ ಪ್ರತಿಕ್ರಿಯಿಸಿರುವ ಕೇರಳದ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್, ಇದು ಉತ್ತಮ ಸಲಹೆ. ಚಂದ್ರನಲ್ಲಿ ಕೊಠಡಿ ಹಾಗೂ ಟಿಕೇಟ್ ಕಾಯ್ದಿರಿಸಿದರೆ ನಾನು ಚಂದ್ರನಲ್ಲಿಗೆ ಹೋಗುತ್ತೇನೆ ಎಂದಿದ್ದಾರೆ.

ಗುಂಪಿನಿಂದ ಥಳಿಸಿ ಹತ್ಯೆ ಹಾಗೂ ಅಸಹಿಷ್ಣುತೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ 49 ಖ್ಯಾತನಾಮರಲ್ಲಿ ಒಬ್ಬರಾಗಿರುವ ಚಿತ್ರನಿರ್ದೇಶಕ ಅಡೂರ್ ಅವರಲ್ಲಿ ‘ಜೈ ಶ್ರೀರಾಮ್’ ಪಠಣ ಆಲಿಸಲು ಸಾಧ್ಯವಾಗದೇ ಇದ್ದರೆ, ಚಂದ್ರನಲ್ಲಿಗೆ ಹೋಗುವಂತೆ ಕೇರಳದ ಬಿಜೆಪಿ ನಾಯಕ ಬಿ. ಗೋಪಾಲಕೃಷ್ಣನ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದರು. ‘‘ಇದು ರಾಮಾಯಣ ತಿಂಗಳು. ಭಾರತ ಹಾಗೂ ನೆರೆಯ ದೇಶಗಳಲ್ಲಿ ಜೈ ಶ್ರೀರಾಮ್ ಘೋಷಣೆ ಹೊರ ಹೊಮ್ಮುತ್ತಿರುತ್ತದೆ. ನಿಮಗೆ ಇಲ್ಲಿ ಇರಲು ಸಾಧ್ಯವಾಗದೇ ಇದ್ದರೆ, ಶ್ರೀಹರಿಕೋಟದಲ್ಲಿ ಹೆಸರು ನೋಂದಾಯಿಸಿಕೊಳ್ಳಿ ಹಾಗೂ ಚಂದ್ರನಲ್ಲಿಗೆ ಹೋಗಿ’’ ಎಂದು ಗೋಪಾಲಕೃಷ್ಣನ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಡೂರು ‘‘ನಾನು ಈ ಕೊಡುಗೆ ಬಗ್ಗೆ ಆಕರ್ಷಿತನಾಗಿದ್ದೇನೆ. ನಾನು ಜಗತ್ತಿನಾದ್ಯಂತ ಪ್ರಯಾಣಿಸಿದ್ದೇನೆ. ಚಂದ್ರನ ಬಗ್ಗೆ ಕುತೂಹಲ ಇದೆ. ಚಂದ್ರನನನ್ನು ನೋಡಲು ಬಯಸುತ್ತೇನೆ. ಅವರು ನನಗೆ ಟಿಕೆಟ್ ಹಾಗೂ ಹೊಟೇಲ್ ಕಾಯ್ದಿರಿಸಬಹುದು’’ ಎಂದಿದ್ದಾರೆ. ಪತ್ರ ‘ಜೈ ಶ್ರೀರಾಮ್’ ಎಂದು ಮಂತ್ರ ಪಠಿಸುವ ವಿರುದ್ಧವಲ್ಲ. ಬದಲಾಗಿ ‘ಪಠಣವನ್ನು ಯುದ್ಧದ ಕೂಗು’ ಆಗಿ ಬಳಸುತ್ತಿರುವುದರ ವಿರುದ್ಧ ಎಂದು ಅಡೂರು ಹೇಳಿದ್ದಾರೆ. ನಾನು ವೈಯುಕ್ತಿಕವಾಗಿ ಇಂತಹ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಈ ಪತ್ರ ಬರೆದವರು ರಾಜಕೀಯದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗದವರು. ಕಲಾವಿದರು, ಲೇಖಕರು, ಚಿತ್ರ ಕಲಾವಿದರು. ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ನಾವು ಪ್ರಜ್ಞೆ ಹೊಂದಿದ್ದೇವೆ. ರಾಮನ ಶ್ರೇಷ್ಟ ಅಸ್ತ್ತಿತ್ವ ನೋಡುತ್ತಾ ಬೆಳೆದವರು ನಾವು. ಹಿಂಸೆಗೆ ರಾಮನ ಹೆಸರು ಬಳಸಬಾರದು ಎಂದು ನಾವು ಎಲ್ಲರೂ ಸಹಿ ಹಾಕಿ ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದೇವೆ. ಗುಂಪಿನಿಂದ ಥಳಿಸಿ ಹತ್ಯೆಗೈಯಲು, ಜನರನ್ನು ಕೊಲ್ಲಲು ಇದು ‘ಯುದ್ಧದ ಕೂಗು ಅಲ್ಲ’ ಎಂದು ಅಡೂರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News