ಉಡುಪಿ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯ ಕ್ಯಾನಿನ ನೀರಿನಲ್ಲಿ ಅಲ್ಕೋಹಾಲ್ ಅಂಶ ಪತ್ತೆ !
ಉಡುಪಿ, ಜು. 27: ಉಡುಪಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸರಬರಾಜು ಮಾಡಿ ರುವ ನೀರಿನ ಕ್ಯಾನ್‌ನಲ್ಲಿ ಅಲ್ಕೋಹಾಲ್ ಅಂಶ ಪತ್ತೆಯಾಗಿದ್ದು, ದುಷ್ಕರ್ಮಿ ಗಳು ರೋಗಿಗಳ ಪ್ರಾಣಕ್ಕೆ ಹಾನಿ ಉಂಟು ಮಾಡುವ ಪ್ರಯತ್ನವಾಗಿ ಈ ದುಷ್ಕೃತ್ಯ ಎಸಗಿರುವುದಾಗಿ ದೂರಲಾಗಿದೆ.
ಮೇ 13ರಂದು ಸಂಜೆ ವೇಳೆ ಅಜಿತ್ ಎಂಬವರು ಆಸ್ಪತ್ರೆಗೆ ನೀರಿನ ಕ್ಯಾನ್ ಡೆಲಿವರಿ ಮಾಡಿದ್ದು ಇವುಗಳಲ್ಲಿ ಮೂರು ಕ್ಯಾನ್‌ಗಳಿಗೆ ಲೇಬಲ್ ಇಲ್ಲದಿರುವುದರಿಂದ ಹಿಂದಕ್ಕೆ ಕಳುಹಿಸಲಾಗಿತ್ತು. ಉಳಿದ ಮೂರು ಕ್ಯಾನ್ಗಳನ್ನು ಸ್ಟೋರ್ ಎಕ್ಸಿಕ್ಯೂಟಿವ್ ಗೋಕುಲ ಸ್ವೀಕರಿಸಿದ್ದರೆನ್ನಲಾಗಿದೆ.
ಇದರಲ್ಲಿ ಎರಡು ಕ್ಯಾನ್‌ಗಳು 2019ರಲ್ಲಿ ತಯಾರಾಗಿದ್ದು, ಒಂದು ಕ್ಯಾನ್ ನಲ್ಲಿ ಬ್ಯಾಚ್ ನಂಬ್ರ 21/2017 ಎಂಬುದಾಗಿ ಇತ್ತು. ಜೂ.4ರಂದು ಆಸ್ಪತ್ರೆಯ ಹ್ಯೂಮಿಡಿಫೈಯರ್‌ಗಳಿಗೆ ಬ್ಯಾಚ್ ನಂಬ್ರ 21/2017ರ ಕ್ಯಾನ್ ನಿಂದ ಶುದ್ಧೀಕರಿಸಿದ ನೀರು ಭರ್ತಿ ಮಾಡಲಾಗಿತ್ತು.
ಅದೇ ದಿನ ಮಧ್ಯಾಹ್ನ ಆಸ್ಪತ್ರೆಯ ನರ್ಸಿಂಗ್ ಸೂಪರ್‌ವೈಸರ್ ಸಂದೇಶ್ ಮತ್ತು ನರ್ಸ್ ಡ್ರಾಯನ್ ಎಂಬವರು ಸ್ಟ್ರೇಚರ್‌ಗಳನ್ನು ಕನ್ಸಲ್ಟೇಷನ್ ಕೋಣೆಯ ಹತ್ತಿರ ತಂದು ಸಿಲಿಂಡರ್ ಅಳವಡಿಸಲು ತಯಾರು ಮಾಡಿದಾಗ ಕೆಲವು ಹನಿ ಕೈಗೆ ಬಿತ್ತೆನ್ನಲಾಗಿದೆ. ಆಗ ಅವರಿಗೆ ಹಿಮದ ಅನುಭವ ಆಗಿದ್ದು, ಹ್ಯೂಮಿಡಿಫೈಯರ್‌ನ್ನು ಪರೀಕ್ಷಿಸಿದಾಗ ಅದರಲ್ಲಿ ಸ್ಪೀರಿಟ್ ವಾಸನೆ ಬರುತ್ತಿತ್ತು ಎಂದು ದೂರಲಾಗಿದೆ.
ಈ ನೀರನ್ನು ಪರೀಕ್ಷಿಸುವ ಸಲುವಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ಬಂದ ವರದಿಯಂತೆ ಈ ನೀರಿನಲ್ಲಿ ಶೇ.53.43 ಅಲ್ಕೋಹಾಲ್ ಇರುವುದು ಕಂಡು ಬಂದಿದೆ. ಕಿಡಿಗೇಡಿಗಳು ಅಧ್ಯಕ್ಷರು ಮತ್ತು ಆಸ್ಪತ್ರೆಯ ಗೌರವ ಮತ್ತು ಖ್ಯಾತಿಯನ್ನು ನಾಶ ಮಾಡುವ ದುರುದ್ದೇಶ ದಿಂದ ಪ್ರಾಣಹಾನಿ ಅಥವಾ ರೋಗಿಗಳಿಗೆ ಹಾನಿ ಉಂಟು ಮಾಡುವ ಪ್ರಯತ್ನ ಮಾಡಲು ಈ ಕೃತ್ಯವನ್ನು ಎಸಗಿರುವುದಾಗಿ ಆಸ್ಪತ್ರೆಯ ವ್ಯ. ಪ್ರಶಾಂತ್ ಮಲ್ಯ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.