×
Ad

ಯುಎಪಿಎ ತಿದ್ದುಪಡಿ ಮಸೂದೆಯನ್ನು ಸೋಲಿಸಿ: ಪಿಎಫ್ಐಯಿಂದ ಪತ್ರ

Update: 2019-07-27 15:37 IST

ಹೊಸದಿಲ್ಲಿ: ಲೋಕಸಭೆ ಅಂಗೀಕರಿಸಿದ ಯುಎಪಿಎ ತಿದ್ದುಪಡಿ ಮಸೂದೆಯನ್ನು ಮೇಲ್ಮನೆಯಲ್ಲಿ ಮತ ಚಲಾಯಿಸುವ ಮೂಲಕ ಸೋಲಿಸುವಂತೆ ಎನ್‌ಡಿಎ ಅಲ್ಲದ ರಾಜ್ಯಸಭಾ ಸಂಸದರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಎಂ. ಮೊಹಮ್ಮದ್ ಅಲಿ ಜಿನ್ನಾ ಇಂದು ಮನವಿ ಮಾಡಿದ್ದಾರೆ. 

ವಿವಾದಾತ್ಮಕ ಎನ್‌ಐಎ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಅವಕಾಶ ನೀಡುವ ಮೂಲಕ ಅವರು ಮಾಡಿದ ತಪ್ಪನ್ನು  ಎನ್‌ಡಿಎ ಯೇತರ ಪಕ್ಷಗಳು ಬಹುಮತವಿರುವ ರಾಜ್ಯಸಭೆಯಲ್ಲಿ ಪುನರಾವರ್ತಿಸಬಾರದು ಎಂದು ಅವರು ಮನವಿ ಮಾಡಿದರು. ಸಂಸದರಿಗೆ ಪ್ರತ್ಯೇಕವಾಗಿ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ ಎಂದು ಹೇಳಿದರು.

ಇಮೇಲ್‌ನ ಪೂರ್ಣಭಾಗ:

"ಈ ಪತ್ರವು ನಿಮ್ಮನ್ನು ಉತ್ತಮ ಆರೋಗ್ಯ ಮತ್ತು ಪ್ರಜಾಪ್ರಭುತ್ವ ಮನೋಭಾವದಿಂದ ಕಂಡುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ.

24-07-2019 ರಂದು ಲೋಕಸಭೆಯು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2019ನ್ನು ಅಂಗೀಕರಿಸಿದೆ ಎಂಬ ಅಂಶವನ್ನು ನಾವು ನಿರಾಶದಾಯಕವಾಗಿ ತಿಳಿದಿದ್ದೇವೆ. ಸಮಂಜಸವಾದ ಪ್ರಶ್ನೆಗಳು ಮತ್ತು ಕಾಳಜಿ ಮೂಲಕ ಪ್ರತಿಪಕ್ಷದ ಸದಸ್ಯರು ತೀವ್ರ ವಿರೋಧವನ್ನು ಪ್ರಕಟಿಸಿದ್ದರೂ, ದುರದೃಷ್ಟವಶಾತ್ ಕೇವಲ ಎಂಟು ಮಂದಿ ಸದಸ್ಯರು ಮಾತ್ರ ಮಸೂದೆಯ ವಿರುದ್ಧ ಮತ ಚಲಾಯಿಸಿದರು, ಉಳಿದವರು ಹೆಚ್ಚಾಗಿ ಮತದಾನದಿಂದ ಹೊರ ನಡೆದರು. ನಿಮಗೆ ಚೆನ್ನಾಗಿ ತಿಳಿದಿರುವಂತೆ, ಕಳೆದ ಐದು ವರ್ಷಗಳಲ್ಲಿ ಯುಎಪಿಎಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ರೀತಿಯ ಪ್ರಜಾಪ್ರಭುತ್ವ ಅಭಿವ್ಯಕ್ತಿಗೆ ವಿರುದ್ಧವಾಗಿ ದುರುಪ ಯೋಗಪಡಿಸಿಕೊಂಡಿದೆ.

ಸರ್ಕಾರವನ್ನು ವಿರೋಧಿಸುವ ಮುಸ್ಲಿಮರು, ದಲಿತರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಲು ಇದನ್ನು ಬಳಸಲಾಯಿತು. ಮುಸ್ಲಿಂ ಸಂಘಟನೆಗಳನ್ನು ವಿಶೇಷವಾಗಿ ಗುರಿಯಾಗಿಸಲಾಗಿತ್ತು. ಅದು ಇನ್ನಷ್ಟು ಹೆಚ್ಚು ಕಠಿಣವಾದ ನಿಬಂಧನೆಗಳನ್ನು ಸೇರಿಸುವ ಮೂಲಕ ಕಾನೂನಿನ ಪ್ರಸ್ತುತ ವಿಸ್ತರಣೆಯನ್ನು ಗಂಭೀರ ಕಾಳಜಿಯ ವಿಷಯವನ್ನಾಗಿ ಮಾಡುತ್ತದೆ.

ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಚಿತ್ರಿಸುವ ನಿರಂಕುಶ ಪ್ರವೃತ್ತಿ ಹೊಂದಿರುವ ಕೋಮುವಾದಿ ಪಕ್ಷಪಾತದ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಅಧಿಕಾರ ನೀಡುವುದು, ನಾಗರಿಕ ಸ್ವಾತಂತ್ರ್ಯಗಳ ಉಲ್ಲಂಘನೆಗೆ ಬಾಗಿಲು ತೆರೆಯುವುದಕ್ಕೆ ಸಮಾನವಾಗಿದೆ. ಇದು ನಮ್ಮ  ಸ್ವಾತಂತ್ರ್ಯ ಹಾಗೂ ನ್ಯಾಯದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಕ್ಷಯಿಸುವಂತೆ ಮಾಡುತ್ತದೆ. ಆದ್ದರಿಂದ, ಈ ಮಸೂದೆ ಕಾನೂನಾಗುವುದನ್ನು ತಡೆಯಬೇಕು. ಎನ್‌ಡಿಎಗೆ ಬಹುಮತವಿಲ್ಲದ ಕಾರಣ, ರಾಜ್ಯಸಭೆಯಲ್ಲಿ ಮತದಾನಕ್ಕೆ ಬಂದಾಗ ಎಲ್ಲಾ ವಿರೋಧ ಪಕ್ಷದ ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರೆ ಇದು ಸಾಧ್ಯವಿದೆ ಎಂದು ತಿಳಿಸಿದೆ.

ಆದ್ದರಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ, ನಮ್ಮ ರಾಷ್ಟ್ರ ಮತ್ತು ಜನರ ಹಿತದೃಷ್ಟಿಯಿಂದ, ರಾಜ್ಯಸಭೆಯಲ್ಲಿ ಮಸೂದೆಯ ವಿರುದ್ಧ ಮತ ಚಲಾಯಿಸಲು ಮತ್ತು ಬಿಜೆಪಿ ಸರ್ಕಾರದ ಕಠಿಣ ಕ್ರಮವನ್ನು ಸೋಲಿಸಲು, ನಾನು ನಿಮ್ಮ ಮತ್ತು ನಿಮ್ಮ ಪಕ್ಷದ ಸಹೋದ್ಯೋಗಿಗಳನ್ನುವಿನಂತಿಸುತ್ತೇನೆ ಎಂದು ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ಡಾ. ಮೊಹಮ್ಮದ್ ಶಮೂನ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News