ಮಂಗಳೂರು: ಇಬ್ರಾಹಿಂ ತಣ್ಣೀರುಬಾವಿಗೆ ನುಡಿನಮನ ಕಾರ್ಯಕ್ರಮ
ಮಂಗಳೂರು: ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ, ಕಲಾವಿದ ಇಬ್ರಾಹಿಂ ತಣ್ಣೀರುಬಾವಿ ಅವರಿಗೆ ಸಂತಾಪ ಸೂಚಕ ಸಭೆಯು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆಯಿತು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿ, ಇಂದು ಬ್ಯಾರಿ ಭಾಷೆ, ಸಾಹಿತ್ಯದಲ್ಲಿ ಸಾಧನೆ, ಅಕಾಡೆಮಿ ಸ್ಥಾಪನೆಯಾಗಿದ್ದರೆ, ಅದರ ಹಿಂದೆ ಇಬ್ರಾಹಿಂ ತಣ್ಞೀರುಬಾವಿ ಅವರ ಶ್ರಮವಿದೆ. ಕವಿ, ನಾಟಕಕಾರನಾಗಿ ಅತ್ಯುತ್ತಮ ಕಲಾವಿದರಾ ಗಿದ್ದರು. ನಿಸ್ವಾರ್ಥವಾಗಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಕಾರಣಕರ್ತರಾಗಿದ್ದರು ಎಂದರು.
ಹಿರಿಯ ಗಾಯಕ ಖಾಲಿದ್ ತಣ್ಞೀರುಬಾವಿ ಮಾತನಾಡಿ, ದಿವಂಗತ ಇಬ್ರಾಹಿಂ ನನ್ನ ನೆರೆಮನೆಯವರಾಗಿದ್ದರು. ತಣ್ಞೀರುಬಾವಿ ತಂಡದ ನಾಟಕಗಳು ಅವರ ಹಾಡುಗಳಿಂದಲೇ ಪ್ರಸಿದ್ಧವಾಗಿದ್ದವು. ಅವರ ನಾನೊರ್ ಮುಸ್ಲಿಂ... ಹಾಡು ಮರೆಯಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಕುಳಿತಲ್ಲೆಲ್ಲಾ ಹಾಡು ಬರೆಯುತ್ತಿದ್ದರು. ಅವರ ಹಾಡುಗಳನ್ನು ನಾನು ಕ್ಯಾಸೆಟ್‌ಗೆ ಹಾಡಿದ್ದೆ. ಮನೆಯಲ್ಲಿ ಕಷ್ಟವಿದ್ದರೂ ಲವಲವಿಕೆ ಮೈಗೂಡಿಸಿಕೊಂಡಿದ್ದರು ಎಂದರು.
ಸಂಘಟಕ ಅಹ್ಮದ್ ಬಜಾಲ್ ಮಾತನಾಡಿ, ಅವರು ವ್ಯಕ್ತಿಯಲ್ಲ, ಒಂದು ಆದರ್ಶ. ಅವರು ಇಲ್ಲದಿದ್ದರೂ ಅವರ ಬದುಕಿನಿಂದ ನಮಗೆ ಸಾಕಷ್ಟು ಕಲಿಯಲು ಇದೆ ಎಂದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ಹಿರಿಯ ಕವಿ ಮುಹಮ್ಮದ್ ಬಡ್ಡೂರ್, ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ.ನಾವಡ, ಅಕಾಡೆಮಿ ಸದಸ್ಯ ಅತ್ತೂರು ಚಯ್ಯಬ್ಬ, ಆಲಿಯಬ್ಬ ಜೋಕಟ್ಟೆ, ಹೈದರ್ ಪರ್ತಿಪ್ಪಾಡಿ, ಹಸನಬ್ಬ ಮೂಡುಬಿದಿರೆ, ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ನುಡಿನಮನ ಸಲ್ಲಿಸಿದರು.
ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.