ಆರು ವರ್ಷದ ಈ ಯೂಟ್ಯೂಬ್ ಸ್ಟಾರ್ ಖರೀದಿಸಿದ್ದಾಳೆ ರೂ. 55 ಕೋಟಿ ಮೌಲ್ಯದ ಆಸ್ತಿ!

Update: 2019-07-27 12:52 GMT

ಸಿಯೋಲ್: ದಕ್ಷಿಣ ಕೊರಿಯಾದ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ವಿವಾದಾತ್ಮಕ ಆರು ವರ್ಷ ಪ್ರಾಯದ ಯೂಟ್ಯೂಬ್ ತಾರೆ ಬರೋಬ್ಬರಿ 8 ಮಿಲಿಯನ್ ಡಾಲರ್ ( ರೂ. 55 ಕೋಟಿಗೂ ಅಧಿಕ) ಮೌಲ್ಯದ ಆಸ್ತಿ ಖರೀದಿಸಿದ್ದಾಳೆ.

ತನ್ನ 30 ಮಿಲಿಯನ್ ಯೂಟ್ಯೂಬ್ ಚಂದಾದಾರರಿಗೆ ಬೋರಂ ಎಂದೇ ಪರಿಚಿತಳಾಗಿರುವ ಈಕೆ ಸಿಯೋಲ್ ಉಪನಗರಿ ಗಂಗ್ನಂ ಎಂಬಲ್ಲಿನ ಪ್ರತಿಷ್ಠಿತ ಪ್ರದೇಶದಲ್ಲಿ 2,770 ಚದರ ಅಡಿ ವಿಸ್ತೀರ್ಣದ ಜಮೀನಿನಲ್ಲಿರುವ ಐದು ಅಂತಸ್ತಿನ ಕಟ್ಟಡವನ್ನು ಈ ವರ್ಷ ಖರೀದಿಸಿದ್ದಾಳೆ.

ಆಕೆಯ ಹೆತ್ತವರು ಸ್ಥಾಪಿಸಿರುವ ಬೋರಂ ಫ್ಯಾಮಿಲಿ ಕಂಪೆನಿ ಮುಖಾಂತರ ಈ ಆಸ್ತಿ ಖರೀದಿಸಲಾಗಿದೆ. ಯೂಟ್ಯೂಬ್ ನಲ್ಲಿರುವ ಬೋರಂಳ ಆಟಿಕೆ ರಿವೀವ್ ಚಾನೆಲ್ 1.36 ಕೋಟಿ ಚಂದಾದಾರರನ್ನು ಹೊಂದಿದ್ದರೆ ಆಕೆಯ ವೀಡಿಯೋ ಬ್ಲಾಗ್ ಖಾತೆಗೆ 1.76 ಕೋಟಿ ಚಂದಾದಾರರಿದ್ದಾರೆ.

ಆಕೆಯ ಯೂಟ್ಯೂಬ್ ಚಾನೆಲುಗಳು ಮಾಸಿಕ ಅಂದಾಜು ರೂ 21 ಲಕ್ಷಕ್ಕೂ ಅಧಿಕ ಆದಾಯ ತರುತ್ತಿವೆ. ಆಕೆಯ ಹಲವಾರು ಯೂಟ್ಯೂಬ್ ವೀಡಿಯೋಗಳನ್ನು 30 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದಾರೆ. ಪ್ಲಾಸ್ಟಿಕ್ ಆಟಿಕೆ ಅಡುಗೆ ಕೋಣೆಯಲ್ಲಿ ಆಕೆ ತಾನೇ ತಯಾರಿಸಿದ ಇನ್‍ಸ್ಟೆಂಟ್ ನೂಡಲ್ಸ್ ತಿನ್ನುವ ವೀಡಿಯೋ ಕೂಡ ಭಾರೀ ಹಿಟ್ ಆಗಿದೆ.

‘ಬೋರಂ ಹ್ಯಾಸ್ ಎ ಕೋಲ್ಡ್' ಎಂಬ ಇನ್ನೊಂದು ವೀಡಿಯೋದಲ್ಲಿ ಆಕೆ ಮಳೆಯಲ್ಲಿ ಪಾರ್ಕ್ ನಲ್ಲಿ ನೆನೆದು ಶೀತ ಉಂಟಾಗಿದ್ದಕ್ಕೆ ತಾನೇ ತಯಾರಿಸಿ ಕುಡಿಯುವ ಮನೆ ಮದ್ದು ಕುಡಿಯುವ ದೃಶ್ಯವಿದೆ.

ಆದರೆ ಆಕೆ ತನ್ನ ತಂದೆಯ ಪರ್ಸಿನಿಂದ ಹಣ ಕದ್ದು ರಸ್ತೆಯಲ್ಲಿ ಕಾರು ಚಲಾಯಿಸುವ ವೀಡಿಯೋ ಸಹಿತ ಆಕೆಯ ಹಲವು ವೀಡಿಯೋಗಳು ವಿವಾದಕ್ಕೀಡಾಗಿವೆ. ಆಕೆಯ ಕೆಲ ವಿವಾದಾತ್ಮಕ ವೀಡಿಯೋಗಳನ್ನು ಯೂಟ್ಯೂಬ್ ನಿಂದ ಕೈಬಿಡಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News