ಕೃಷಿಕ ಸಂಘದಿಂದ ಶೀಘ್ರ ‘ರೈತ ಉತ್ಪಾದಕ ಕಂಪೆನಿ’ಗೆ ಚಾಲನೆ
ಉಡುಪಿ, ಜು.27: ರೈತರೇ ತಮ್ಮ ಬೆಳೆಯ ಉತ್ಪಾದನೆ, ವೌಲ್ಯವರ್ಧನೆ ಹಾಗೂ ಮಾರಾಟಕ್ಕೆ ಮುಂದಾಗಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಹೊಸ ಯೋಜನೆ ‘ರೈತ ಉತ್ಪಾದಕ ಕಂಪೆನಿ’ಯನ್ನು ಉಡುಪಿ ಜಿಲ್ಲಾ ಕೃಷಿಕ ಸಂಘ ಶೀಘ್ರದಲ್ಲೇ ಹುಟ್ಟುಹಾಕಲಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಗತಿಪರ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್ ತಿಳಿಸಿದ್ದಾರೆ.
ಇಂದು ಉಡುಪಿಯಲ್ಲಿ ನಡೆದ ಜಿಲ್ಲಾ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ದಲ್ಲಿ ಮಾತನಾಡುತಿದ್ದ ಅವರು, ಈ ಯೋಜನೆಯಲ್ಲಿ ಒಂದು ಸಾವಿರ ಕೃಷಿಕರು ತಲಾ ಒಂದು ಸಾವಿರ ರೂ. ಬಂಡವಾಳದೊಂದಿಗೆ ಕಂಪೆನಿಯನ್ನು ಹುಟ್ಟು ಹಾಕಲಿದ್ದು, ಇದು ತೋಟಗಾರಿಕಾ ಇಲಾಖೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿದೆ. ಒಂದು ಸಾವಿರ ಕೃಷಿಕರು ಸೇರಿ ಹತ್ತು ಲಕ್ಷ ರೂ. ಬಂಡವಾಳದೊಂದಿಗೆ ಕಂಪೆನಿ ನೊಂದಾ ವಣಿಗೊಳ್ಳುತಿದ್ದಂತೆ ಕೇಂದ್ರವೂ ಇದಕ್ಕೆ 10ಲಕ್ಷ ರೂ.ವನ್ನು ನೀಡಲಿದೆ. ಹೀಗೆ 20 ಲಕ್ಷ ರೂ. ಮೂಲ ಬಂಡವಾಳ ದೊಂದಿಗೆ ಕಂಪೆನಿ ಪ್ರಾರಂಭಗೊಳ್ಳುತ್ತದೆ ಎಂದರು.
ಇದು ರೈತರೇ ಸೇರಿ ನಡೆಸುವ ಕಂಪೆನಿಯಾಗಿದ್ದು, ಇದರ ಮೂಲಕ ರೈತರ ಯಾವುದೇ ಯೋಜನೆ ಕಾರ್ಯಗತಗೊಂಡರೆ ಅದಕ್ಕೆ ಶೇ.50ಕ್ಕಿಂತ ಅಧಿಕ ಸಹಾಯಧನ ಕೇಂದ್ರದಿಂದ ಲಭಿಸುತ್ತದೆ. ಈ ಮೂಲಕ ರೈತರು ಮಧ್ಯವರ್ತಿಗಳ ನೆರವಿಲ್ಲದೇ ತಾವು ಬೆಳೆದ ಬೆಳೆಗಳ ವೌಲ್ಯವರ್ಧನೆಗೊಳಿಸಿ, ಮಾರುಕಟ್ಟೆಗೆ ನೇರವಾಗಿ ಬಿಡಬಹುದಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಕಾರ್ಕಳದಲ್ಲಿ ತೆಂಗು ಬೆಳೆಗಾರರು ಒಂದು ಸಾವಿರ ಮಂದಿ ಸೇರಿ ಇಂಥ ಕಂಪೆನಿಯೊಂದನ್ನು ಪ್ರಾರಂಭಿಸಿದ್ದಾರೆ. ಕಂಪೆನಿಯನ್ನು ಏಕ ಬೆಳೆಗೆ ಅಥವಾ ಆಯ್ದ ಬೆಳೆಗಳಿಗೆ ಸೇರಿ ಪ್ರಾರಂಭಿಸಬಹುದಾಗಿದೆ. ಕೃಷಿಕ ಸಂಘದಿಂದ ಪ್ರಮುಖ ಬೆಳೆಗಳನ್ನು ಸೇರಿಸಿ ಕಂಪೆನಿ ಪ್ರಾರಂಭಿಸಲು ಸಿದ್ಧತೆ ನಡೆದಿದ್ದು, ಅಕ್ಟೋಬರ್ ಒಳಗೆ ನೊಂದಣಿಗೊಳ್ಳುವ ಸಾಧ್ಯತೆ ಇದೆ ಎಂದವರು ತಿಳಿಸಿದರು.