‘ಗ್ರಾಮಗಳ ಅಭಿವೃದ್ಧಿಯ ಹರಿಕಾರ’ ಕೆ.ಎಂ.ಉಡುಪ ನಿಧನ

Update: 2019-07-27 16:03 GMT

ಮಣಿಪಾಲ, ಜು.27: ಕೃಷಿಕರಿಗೆ ಬ್ಯಾಂಕುಗಳ ಬಾಗಿಲು ತೆರೆಯಲು ಕಾರಣಕರ್ತರಲ್ಲಿ ಒಬ್ಬರಾದ, ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕಾರ್ಕಡ ಮಂಜುನಾಥ ಉಡುಪ(ಕೆ.ಎಂ.ಉಡುಪ) ಅಲ್ಪಕಾಲದ ಅಸೌಖ್ಯದಿಂದ ಇಂದು ರಾತ್ರಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಗ್ರಾಮೀಣ ಅಭಿವೃದ್ಧಿಯ ಹರಿಕಾರ ಎಂದೇ ಪ್ರಸಿದ್ಧರಾದ ಕೆ.ಎಂ.ಉಡುಪ 1938ರ ಆ.22ರಂದು ಮಂದಾರ್ತಿಯಲ್ಲಿ ಜನಿಸಿದ್ದರು.

ಮೈಸೂರು ವಿವಿ ಯಿಂದ ಕೃಷಿಯಲ್ಲಿ ಬಿಎಸ್ಸಿ ಪದವಿ ಪಡೆದ ಅವರು ಬಳಿಕ ಕಟಕ್‌ನ ಸೆಂಟ್ರಲ್ ರೈಸ್ ಇನ್‌ಸ್ಟಿಟ್ಯೂಟ್‌ನಿಂದ ಅಕ್ಕಿ ತಳಿ ಅಭಿವೃದ್ಧಿಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ಪಡೆದಿದ್ದರು. ಇವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಇವರ ಅಂತ್ಯಸಂಸ್ಕಾರ ರವಿವಾರ ಬೆಳಗ್ಗೆ 11:30ಕ್ಕೆ ಮಂದಾರ್ತಿಯಲ್ಲಿ ನಡೆಯಲಿದೆ.

ಮೊದಲು ಕೃಷಿ ಇಲಾಖೆಯಲ್ಲಿ ಸಂಶೋಧನಾಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿ, ಟಿ.ಎ.ಪೈ ಅವರ ಪ್ರೇರಣೆಯಿಂದ ಸಿಂಡಿಕೇಟ್ ಬ್ಯಾಂಕಿಗೆ 1967ರಲ್ಲಿ ಸೇರ್ಪಡೆಯಾದರು. ಬ್ಯಾಂಕಿನ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಮಲಪ್ರಬಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿ ಐದು ವರ್ಷ ಸೇವೆ ಸಲ್ಲಿಸಿದರು. ಸಿಂಡಿಕೇಟ್ ಬ್ಯಾಂಕಿನ ಮುಖಾಂತರ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಸಾಲ ಯೋಜನೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗ್ರಾಮೀಣ ಬ್ಯಾಂಕಿನ ಮುಖಾಂತರ ತನ್ನ ಸೇವಾವಧಿಯಲ್ಲಿ ಸೌರಉಪಕರಣ ಗಳಿಗೆ ಗ್ರಾಮೀಣ ಬ್ಯಾಂಕುಗಳಿಂದ ಸಾಲ ನೀಡುವ ಯೋಜನೆಯನ್ನು ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಅನುಷ್ಠಾನ ಗೊಳಿಸಿದರು. ನಿವೃತ್ತಿಯ ನಂತರ ಸೆಲ್ಕೋ ಸಂಸ್ಥೆಯ ನಿರ್ದೇಶಕರಾಗಿ ಡಾ. ಹರೀಶ್ ಹಂದೆ ಅವರ ಜೊತೆ ಸೆಲ್ಕೋ ಸಂಸ್ಥೆಯ ಗ್ರಾಮೀಣ ಜನರ ಮನೆಗಳಿಗೆ ಸೌರ ದೀಪ ಒದಗಿಸುವಲ್ಲಿ  ಮಹತ್ತರ ಕೊಡುಗೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ, ರುಡ್‌ಸೆಟ್ ಆಡಳಿತ ಮಂಡಳಿಯ ಸದಸ್ಯರಾಗಿ ಸಿಂಡಿಕೇಟ್ ಕೃಷಿ ಮತ್ತು ಗ್ರಾಮೀಣಾಭಿವೃಧ್ಧಿ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, 20 ವರ್ಷಗಳ ಕಾಲ ಕಾರ್ಯದರ್ಶಿಯಾಗಿ, ಟಿ.ಎ.ಪೈ ಅವರಿಂದ ಸ್ಥಾಪಿಸಲ್ಪಟ್ಟ ಭಾರತೀಯ ವಿಕಾಸ ಟ್ರಸ್ಟ್‌ನ ಟ್ರಸ್ಟಿಯಾಗಿ ಅನಂತರ 2003ರಿಂದ ಆಡಳಿತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ತನ್ನ ತಂದೆಯಿಂದ ಸ್ಥಾಪಿಸಲ್ಪಟ್ಟ ಮಂದಾರ್ತಿಯ ಶ್ರೀದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಭಾರತದ ವಾಣಿಜ್ಯ ಬ್ಯಾಂಕ್‌ಗಳು ಸೌರ ಬೆಳಕಿನ ವ್ಯವಸ್ಥೆಗೆ ಹಣಕಾಸು ಒದಗಿಸುವ ಯೋಜನೆಯನ್ನು ರೂಪಿಸುವಲ್ಲಿ ಉಡುರು ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News