‘ಜಾಗೊ ಬಾಂಗ್ಲಾ’ದಲ್ಲಿ ನಿಧಿ ಹೂಡಿಕೆ: ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್‌ಗೆ ಸಿಬಿಐ ಸಮನ್ಸ್

Update: 2019-07-27 16:04 GMT

ಕೋಲ್ಕತಾ, ಜು. 27: ಟಿಎಂಸಿಯ ಮುಖವಾಣಿ ‘ಜಾಗೋ ಬಾಂಗ್ಲಾ’ದಲ್ಲಿ ನಿಧಿ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿ ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್‌ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.

‘‘ಜಾಗೋ ಬಾಂಗ್ಲಾ ತೃಣಮೂಲ ಪಕ್ಷದ ಅಧಿಕೃತ ದಿನಪತ್ರಿಕೆ. ಪ್ರಕಾಶಕ ಡೆರಿಕ್ ಒಬ್ರಿಯಾನ್. ಸಂಪಾದಕ ಸುಬ್ರತಾ ಬಕ್ಷಿ. ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಸಿಬಿಐ ತಿಂಗಳುಗಳ ಹಿಂದೆ ಇವರಿಬ್ಬರಿಗೆ ಸಮನ್ಸ್ ಜಾರಿ ಮಾಡಿತ್ತು. ಈಗ ಸಿಬಿಐ ಪ್ರಕಾಶಕರಿಗೆ ಜುಲೈ 25ರಂದು ಸಮನ್ಸ್ ಜಾರಿ ಮಾಡಿದೆ’’ ಎಂದು ಒಬ್ರಿಯಾನ್ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ರೋಸ್ ವ್ಯಾಲಿ ಬಹುಕೋಟಿ ಹಗರಣದ ಒಂದು ಭಾಗವಾಗಿ ‘ಜಾಗೋ ಬಾಂಗ್ಲಾ’ದಲ್ಲಿ ನಿಧಿ ಹೂಡಿಕೆ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.

‘ಜಾಗೋ ಬಾಂಗ್ಲಾ’ದ ನಿಧಿಯ ಮೂಲದ ಬಗ್ಗೆ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ಜನವರಿಯಲ್ಲಿ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿರುವ ಟಿಎಂಸಿ ಕಚೇರಿ ನಿರ್ವಹಿಸುತ್ತಿರುವ ಹಾಗೂ ‘ಜಾಗೋ ಬಾಂಗ್ಲಾ’ದ ಬ್ಯಾಂಕ್ ಖಾತೆಗೆ ಸಹಿ ಹಾಕಿರುವ ಮಾಣಿಕ್ ಮುಜುಂದಾರ್ ನಿವಾಸಕ್ಕೆ ಭೇಟಿ ನೀಡಿತ್ತು.

 ‘‘ಮಮತಾ ಬ್ಯಾನರ್ಜಿ ಅವರ ಪೈಂಟಿಂಗ್‌ನಿಂದ ಬಂದ ಆದಾಯ ಜಾಗೋ ಭಾರತ್ ನಿಧಿಗೆ ಹೋಗಿರುವುದು ಶಂಕೆಗೆ ಕಾರಣವಾಗಿದೆ’’ ಎಂದು ರೋಸ್ ವ್ಯಾಲಿ ತನಿಖೆ ಪ್ರಗತಿ ಬಗ್ಗೆ ಅರಿವಿರುವ ಸಿಬಿಐ ಇನ್ಸ್‌ಪೆಕ್ಟರ್ ಒಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News