ಮಂಗಳೂರು: ಎಂಟು ಮಂದಿ ಡೆಂಗ್ ಶಂಕಿತರು ಆಸ್ಪತ್ರೆಗೆ ದಾಖಲು
ಮಂಗಳೂರು, ಜು.27: ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ, ಜನರ ಜೀವದ ಜತೆ ಚೆಲ್ಲಾಟವಾಡುವ ಡೆಂಗ್‌ಗೆ ಮಂಗಳೂರಿನಲ್ಲಿ ಮತ್ತೆ ಎಂಟು ಮಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಏರುಗತಿಯಲ್ಲಿದ್ದ ಡೆಂಗ್ ಪ್ರಕರಣಗಳು ಶನಿವಾರ ಕೇವಲ ಎಂಟು ಕೇಸುಗಳು ದಾಖಲಾಗಿವೆ. ಡೆಂಗ್ ಆವರಿಸುತ್ತಿದ್ದ ವೇಗಕ್ಕೆ ಅಲ್ಪ ಪ್ರಮಾಣದಲ್ಲಿ ಕಡಿವಾಣ ಬಿದ್ದಂತಾಗಿದೆ. ಇದಕ್ಕೆ ದ.ಕ. ಜಿಲ್ಲಾ ಆರೋಗ್ಯ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ರೆಡ್‌ಕ್ರಾಸ್ ಸಂಸ್ಥೆಗಳ ಸಹಕಾರದಿಂದ ಡೆಂಗ್ ಕೇಸುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಶನಿವಾರದವರೆಗೆ ಒಟ್ಟು 500ಕ್ಕೂ ಹೆಚ್ಚು ಡೆಂಗ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನು ಹೊರಜಿಲ್ಲೆಗಳ ಡೆಂಗ್ ಶಂಕಿತರೂ ಜಿಲ್ಲೆಯ ಆಸ್ಪತ್ರೆಗಗಳಿಗೆ ದಾಖಲಾಗಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಗ್ ನಿರ್ಮೂಲನಾ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸಲಾಗಿದೆ. ನಗರದ ಅಲ್ಲಲ್ಲಿ ಫಾಗಿಂಗ್ ನಡೆಸಲಾಗಿದೆ. ಮನೆ, ಕಟ್ಟಡ, ಮಳಿಗೆಗಳ ಸುತ್ತಮುತ್ತ ಅಸ್ವಚ್ಛತೆ ಕಂಡು ಬಂದ ಕೆಲವರಿಂದ 10 ಸಾವಿರ ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.