‘ಪ್ರಕೃತಿ ಸಂರಕ್ಷಣೆ ಮನೆಯಿಂದಲೇ ಆರಂಭವಾಗಲಿ’
ಮಂಗಳೂರು, ಜು.27: ಭವಿಷ್ಯದ ಜೀವನಕ್ಕಾಗಿ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕು. ಪ್ರಕೃತಿ ಸಂರಕ್ಷಣೆಯ ಜಾಗೃತಿಯನ್ನು ಮನೆಯಿಂದಲೇ ಮಕ್ಕಳಿಗೆ ಕಲಿಸುವ ಕೆಲಸವಾಗಬೇಕು ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್‌ನ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ಮಂಗಳೂರು ಶಾಖೆಯಿಂದ ನಗರದ ಹಿದಾಯತ್ ಸೆಂಟರ್‌ನ ಸಭಾಂಗಣದಲ್ಲಿ ಗ್ರೀನ್ ಫೂಟ್ ಪ್ರಿಂಟ್ಸ್ (ಸ್ಟಾರ್ಟ್ ಮೇಕ್ ಎ ಡಿಫರೆನ್ಸ್) ಎಂಬ ಧ್ಯೇಯವಾಕ್ಯದೊಂದಿಗೆ ನಡೆಸಿದ ಪರಿಸರ ಸಂರಕ್ಷಣಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ವರ್ಷಕ್ಕೆ ಒಂದಾದರೂ ಗಿಡ ನೆಡುವ ಅಭ್ಯಾಸ ಮಾಡಿಕೊಳ್ಳಬೇಕು. ಆ ಮೂಲಕ ಪ್ರಕೃತಿಯ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡು, ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ಇದರಿಂದ ಸುಸ್ಥಿರ ಭಾರತ ಕಟ್ಟುವವರಾಗಬೇಕು ಎಂದರು.
ಈ ಸಂದರ್ಭ ಪರಿಸರ ರಕ್ಷಣಾ ಅಭಿಯಾನದ ಲಾಂಛನವನ್ನು ಲೋಕಾರ್ಪಣೆಗೊಳಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಎಸ್‌ಐಒ ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ಉಪಸ್ಥಿತರಿದ್ದರು.
ಪರಿಸರ ಅಭಿಯಾನದ ಸಂಚಾಲಕ ಅಮ್ಮಾರ್ ಅಹ್ಸನ್ ಸ್ವಾಗತಿಸಿದರು. ರುಮಾನ್ ಕುದ್ರೋಳಿ ಕಿರಾಅತ್ ಪಠಿಸಿದರು. ಎಸ್‌ಐಒ ಕಾರ್ಯಕರ್ತ ರಾಹಿಲ್ ಕುದ್ರೋಳಿ ನಿರೂಪಿಸಿದರು.